ಪ್ಯಾರಿಸ್ :ವಿಶ್ವದ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಸ್ವಿಯಾಟೆಕ್, ಅಮೆರಿಕದ ಕೊಕೊ ಗಾಫ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಶನಿವಾರ ರೋಲ್ಯಾಂಡ್ ಗ್ಯಾರೋಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ 18ರ ಹರೆಯದ ಕೊಕೊ ಗಾಫ್ ಅವರನ್ನು 6-1, 6-3ರ ನೇರ ಸೆಟ್‌ಗಳಿಂದ ಸೋಲಿಸಿದರು. 2020ರಲ್ಲಿ ಕೂಡ ಫ್ರೆಂಚ್ ಓಪನ್ ಎತ್ತಿ ಹಿಡಿದಿದ್ದ ಸ್ವಿಯಾಟೆಕ್ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಪೋಲೆಂಡ್‌ನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಗಾ 3 ವರ್ಷಗಳ ಅಂತರದಲ್ಲೇ ಎರಡನೇ ಸಲ ರೋಲ್ಯಾಂಡ್ ಗ್ಯಾರೋಸ್ ಪ್ರೇಕ್ಷಕರೆದುರು ಸಂಭ್ರಮಿಸಿದರು.
ಪ್ಯಾರಿಸ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಜನಸಮೂಹದ ಎದುರು ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡರು. ಏಕಮುಖವಾದ ಫೈನಲ್‌ನಲ್ಲಿ ಸ್ವಿಯಾಟೆಕ್ ಕೇವಲ ಒಂದು ಗಂಟೆ 8 ನಿಮಿಷಗಳಲ್ಲೇ ಭರ್ಜರಿ ಜಯ ದಾಖಲಿಸಿದರು. 2000ನೇ ಇಸವಿಯಲ್ಲಿ ಯುಎಸ್ನ ವಿಲಿಯಮ್ಸ್ ಸೃಷ್ಟಿಸಿದ್ದ ಸತತ 35 ಗೆಲುವಿನ ದಾಖಲೆಯನ್ನು ಪೋಲೆಂಡ್ ಆಟಗಾರ್ತಿ ಸಮಗೊಳಿಸಿದರು.