ಕರ್ನಾಟಕ

karnataka

ETV Bharat / sports

ತೆಲಂಗಾಣ ಸರ್ಕಾರದಿಂದ ನಿಯಮ ಉಲ್ಲಂಘನೆ ಆರೋಪ: ಹೈದರಾಬಾದ್​ ಫಾರ್ಮುಲಾ-ಇ ರೇಸ್ ರದ್ದು - ಕೆಟಿ ರಾಮರಾವ್

ಹೈದರಾಬಾದ್​ನಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಫಾರ್ಮುಲಾ- ಇ ರೇಸ್​ ರದ್ದಾಗಿದೆ. ಕಾಂಗ್ರೆಸ್​ ಸರ್ಕಾರದ ನಿರಾಸಕ್ತಿಯಿಂದಾಗಿ ಎಫ್​ಐಎ ಒಪ್ಪಂದವನ್ನು ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಫಾರ್ಮುಲಾ-ಇ ರೇಸ್ ರದ್ದು
ಫಾರ್ಮುಲಾ-ಇ ರೇಸ್ ರದ್ದು

By ETV Bharat Karnataka Team

Published : Jan 6, 2024, 1:19 PM IST

Updated : Jan 6, 2024, 3:06 PM IST

ಹೈದರಾಬಾದ್:ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಮುಂದಿನ ತಿಂಗಳು ನಡೆಯಬೇಕಿದ್ದ ಫಾರ್ಮುಲಾ-ಇ ರೇಸ್ ದಿಢೀರ್​ ರದ್ದಾಗಿದೆ. ಕಳೆದ ಬಿಆರ್​ಎಸ್​ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ಈಗಿನ ಕಾಂಗ್ರೆಸ್​ ಸರ್ಕಾರ ರದ್ದುಪಡಿಸುವ ನಿರ್ಧಾರಕ್ಕೆ ಬಂದಿದ್ದು, ಒಪ್ಪಂದ ಉಲ್ಲಂಘನೆ ಆರೋಪದ ಮೇಲೆ ಕಾನೂನು ಕ್ರಮಕ್ಕೆ ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ (ಎಫ್​ಐಎ) ಮುಂದಾಗಿದೆ.

ಹಿಂದಿನ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಸರ್ಕಾರ ನಗರದಲ್ಲಿ ಫಾರ್ಮುಲಾ-ಇ ರೇಸ್​ ನಡೆಸಲು ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಪ್ರಾಯೋಗಿಕ ರೇಸಿಂಗ್​ ಕೂಡ ನಡೆಸಲಾಗಿತ್ತು. ಇಂಡಿಯನ್ ರೇಸ್‌ಗಾಗಿ ಎನ್‌ಟಿಆರ್ ಗಾರ್ಡನ್ ಸುತ್ತಲಿನ 2.75 ಕಿಲೋಮೀಟರ್ ಸ್ಟ್ರೀಟ್ ಸರ್ಕ್ಯೂಟ್ ಕೂಡ ಸಿದ್ಧಪಡಿಸಲಾಗಿತ್ತು.

ಇದೇ ಫೆಬ್ರವರಿ 10 ರಂದು ಫಾರ್ಮುಲಾ ಎಫ್​ 1 ರೇಸ್​ ನಡೆಯಬೇಕಿತ್ತು. ಆದರೆ, ರಾಜ್ಯ ಕಾಂಗ್ರೆಸ್​ ಸರ್ಕಾರ ಯಾವುದೇ ಬೆಂಬಲ ನೀಡದ ಕಾರಣ ರೇಸ್​ ಅನ್ನು ರದ್ದು ಮಾಡುವುದಾಗಿ ಎಫ್‌ಐಎ ಪ್ರಕಟಿಸಿದೆ. ಪೌರಾಡಳಿತ ಇಲಾಖೆ ಸ್ಪರ್ಧೆಯ ಒಪ್ಪಂದ ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಪೂರ್ವ ಯಾವುದೇ ಮಾಹಿತಿ ನೀಡದೆ ಒಪ್ಪಂದವನ್ನು ಉಲ್ಲಂಘಿಸಿದ ಇಲಾಖೆಯ ವಿರುದ್ಧ ಕಾನೂನು ಕ್ರಮಕ್ಕೆ ನೋಟಿಸ್ ನೀಡುವುದಾಗಿ ಹೇಳಿದೆ.

ವಿಶ್ವದ 13 ದೇಶಗಳಲ್ಲಿ ನಡೆಯಲಿರುವ ಇ-ರೇಸ್ ಜನವರಿ 13 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿತ್ತು. ಇಂಡಿಯನ್ ರೇಸ್‌ಗಾಗಿ ಕಳೆದ ವರ್ಷ ಎನ್‌ಟಿಆರ್ ಗಾರ್ಡನ್ ಸುತ್ತ ಸ್ಟ್ರೀಟ್ ಸರ್ಕ್ಯೂಟ್ ಸಿದ್ಧಪಡಿಸಲಾಗಿತ್ತು. ಅದರ ನಿರ್ವಹಣೆ ಮತ್ತು ವ್ಯವಸ್ಥೆಗಳನ್ನು ಹೆಚ್​ಎಂಡಿಎ ಮೇಲ್ವಿಚಾರಣೆ ಮಾಡಿತ್ತು. ರೇಸ್‌ನಿಂದಾಗಿ ಹೈದರಾಬಾದ್‌ನ ಇಮೇಜ್ ಹೆಚ್ಚಿದೆ. ಸುಮಾರು 700 ಕೋಟಿ ರೂಪಾಯಿಯಷ್ಟು ಹೂಡಿಕೆ ಕೂಡ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಇ-ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ, ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಾರ್ಮುಲಾ ರೇಸ್ ಅನ್ನು ಆಯೋಜಿಸಲಾಗಿತ್ತು. ಆದರೆ, ಈಗಿನ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದೆ. ಹೀಗಾಗಿ ಈ ಋತುವಿನ ರೇಸ್​ ರದ್ದುಗೊಳಿಸುವುದಾಗಿ ಫೆಡರೇಶನ್ ಇಂಟರ್ನ್ಯಾಷನಲ್ ಆಟೋಮೊಬೈಲ್ಸ್ ಘೋಷಿಸಿದೆ.

ಕೆಟಿಆರ್ ಆಕ್ರೋಶ:ಪ್ರತಿಷ್ಠಿತ ಇ-ರೇಸ್ ರದ್ದಾದ ಬಗ್ಗೆ ಮಾಜಿ ಸಚಿವ ಹಾಗೂ ಬಿಆರ್​ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್​ (ಕೆಟಿಆರ್) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ನಗರದ ಬ್ರಾಂಡ್​ಗೆ ಧಕ್ಕೆಯಾಗುತ್ತಿದೆ. ಹೈದರಾಬಾದ್‌ನ ಕೀರ್ತಿಯನ್ನು ದೇಶದಲ್ಲಿ ಹಾಗೂ ವಿಶ್ವದಲ್ಲಿ ಹೆಚ್ಚಿಸಲು ಹಿಂದಿನ ಸರ್ಕಾರ ಇ-ರೇಸ್ ಅನ್ನು ಉತ್ತಮವಾಗಿ ಆಯೋಜಿಸಲು ನಿರ್ಧಾರ ಕೈಗೊಂಡಿತ್ತು ಎಂದು ಹೇಳಿದ್ದಾರೆ.

ಪರಿಸರ ಸ್ನೇಹಿ ವಾಹನಗಳು ತುಂಬಾ ಉಪಯುಕ್ತವಾಗಿದ್ದು, ಭವಿಷ್ಯವು ಇ-ವಾಹನಗಳ ಮೇಲೆ ನಿಂತಿದೆ. ಕಳೆದ ವರ್ಷ ಪ್ರಾಯೋಗಿಕ ಸ್ಪರ್ಧೆಯನ್ನು ನಡೆಸಲಾಯಿತು. ಈಗ ಸ್ಪರ್ಧೆ ರದ್ದಾಗಿದ್ದು, ನಗರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಎಕ್ಸ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Jan 6, 2024, 3:06 PM IST

ABOUT THE AUTHOR

...view details