ಬ್ರೆಜಿಲ್:ಫುಟ್ಬಾಲ್ ದಂತಕಥೆ ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ(82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಫುಟ್‌ಬಾಲ್‌ನ ಗ್ರೇಟ್ ಆಫ್ ಆಲ್ ಟೈಮ್(GOAT) ಎಂದೇ ಕರೆಯಲ್ವಡುತ್ತಿದ್ದ, ಜಾಗತಿಕ ಕಾಲ್ಚೆಂಡಿನ ಕ್ರೀಡಾ ಹೀರೋ ಆಗಿ ಆಭಿಮಾನಿಗಳ ಹೃದಯ ಗೆದ್ದಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಬ್ರೆಜಿಲ್‌ನ ಮಾಜಿ ಕ್ರೀಡಾ ಸಚಿವರಾಗಿಯೂ ಸೇವೆ ಮಾಡಿದ್ದಾರೆ.
ಪುಟ್ಬಾಲ್ನ್ನು ಒಂದು ಸುಂದರ ಕ್ರೀಡೆಯಾಗಿಸಿದ ಕಾಲ್ಚೆಂಡಿನ ದಿಗ್ಗಜ, ಗ್ಯಾಸೋಲಿನಾ, ದಿ ಬ್ಲ್ಯಾಕ್ ಪರ್ಲ್ ಮತ್ತು ಓ ರೇ (ದಿ ಕಿಂಗ್) ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಪೀಲೆ ಎಂದೇ ಹೆಸರಾಗಿದ್ದ 82 ವರ್ಷದ ಎಡ್ಸನ್ ಗುರುವಾರ ರಾತ್ರಿ ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಕರುಳಿನ ಕ್ಯಾನ್ಸರ್‌ನಿಂದ ನಿಧನರಾದರು.
ಫುಟ್ಬಾಲ್‌ನ ಮಾಸ್ಟರ್ ಮೈಂಡ್ ಎನಿಸಿದ್ದ ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದಿದ್ದರು. ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೀಮೋಥೆರಪಿ ಬಳಿಕ ಶ್ವಾಸಕೋಶ ಸೋಂಕಿನಿಂದ ಉಸಿರಾಟದ ತೊಂದರೆ ಅನುಭವಿಸಿದ್ದರು. ಮೂರು ಸಲ ವಿವಾಹವಾಗಿದ್ದ ಪೀಲೆಗೆ ಒಟ್ಟು 7 ಮಕ್ಕಳಿದ್ದಾರೆ. ಬ್ರೆಜಿಲ್‌ನ ಸ್ಟಾರ್ ಆಟಗಾರರಾಗಿದ್ದ ಅವರು, ಅಲ್ಲಿನ ಆರಾಧ್ಯದೈವ ಕೂಡಾ ಆಗಿದ್ದರು.
ಮಗಳ ಕಣ್ಣೀರ ವಿದಾಯ:‘ನಾವೆಲ್ಲರೂ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ನಾವು ನಿಮ್ಮನ್ನು ಅನಂತವಾಗಿ ಪ್ರೀತಿಸುತ್ತೇವೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ’ ಎಂದು ಮಗಳು ಕೆಲಿ ನಾಸಿಮೆಂಟೊ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಕ್ಟೋಬರ್ 23, 1940 ರಂದು ಬ್ರೆಜಿಲ್‌ನ ಟ್ರೆಸ್ ಕೊರಾಕೋಸ್‌ನಲ್ಲಿ ಜನಿಸಿದ ಪೀಲೆ 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಸೆಲೆಕಾವೊ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದರು. ಶ್ರೇಷ್ಠ ಆಟಗಾರ ಪೀಲೆ ಅವರ ನಿಧನಕ್ಕೆ ಜಗತ್ತಿನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಪೀಲೆ ಆರಂಭ:ಬ್ರೆಸಿಲಿಯಾದ ಫುಟ್ಬಾಲ್ ಕ್ಲಬ್ ಸ್ಯಾಂಟೋಸ್ ಮತ್ತು ಬ್ರೆಜಿಲ್‌ನ ರಾಷ್ಟ್ರೀಯ ತಂಡದೊಂದಿಗೆ ಸುಮಾರು 2 ದಶಕಗಳ ಕಾಲ ಆಡಿ ಅಭಿಮಾನಿಗಳನ್ನು ಗೆದ್ದಿದ್ದರು. ಪೀಲೆ 650 ಲೀಗ್ ಮತ್ತು 1,281 ಸೀನಿಯರ್ ಪಂದ್ಯಗಳಿಂದಾಗಿ 'ಕಾಲ್ಚೆಂಡಿನ ಕಿಂಗ್' ಎಂದು ಕರೆಸಿಕೊಂಡರು. ಪೀಲೆ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಸ್ವೀಡನ್ನಲ್ಲಿ ನಡೆದ ವಿಶ್ವಕಪ್ ಮೂಲಕ ಪದಾರ್ಪಣೆ ಮಾಡಿದರು.