ನವದೆಹಲಿ: ಕರ್ನಾಟಕದ ಪ್ರಸಿದ್ಧ ದೇಶಿಯ ಹಾಗೂ ಕರಾವಳಿ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಓಟ ಸ್ಪರ್ಧೆಯಲ್ಲಿ 142.50 ಮೀಟರ್ ಓಟವನ್ನು 13.62 ಸೆಕೆಂಡ್‌ಗಳಲ್ಲಿ ಮುಗಿಸಿ ದೇಶದ ಮನೆಮಾತಾಗಿರುವ ಶ್ರೀನಿವಾಸ್ ಗೌಡ ಅವರ ವಿಚಾರ ಕೇಂದ್ರ ಸಚಿವರಿಗೂ ತಲುಪಿದೆ.
ಕ್ರೀಡಾ ಸಚಿವರನ್ನು ಮುಟ್ಟಿದ ಮಂಗಳೂರಿನ ಕಂಬಳ ವೀರನ ಓಟದ ಗತ್ತು - ಕ್ರೀಡಾ ಸಚಿವಾ ಕಿರಣ್ ರಿಜಿಜು
ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಓಟ ಸ್ಪರ್ಧೆಯಲ್ಲಿ ಮೂಡಬಿದಿರೆಯ ಶ್ರೀನಿವಾಸ್ ಗೌಡ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಕಂಬಳ ಹಾಗೂ ಶ್ರೀನಿವಾಸ ಗೌಡ ಎಂಬ ಹೆಸರು ದೇಶದಲ್ಲೇ ಟ್ರೆಂಡ್ ಆಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಟ್ವಿಟರ್ನಲ್ಲಿ ಶನಿವಾರ ಕಂಬಳ, ಉಸೇನ್ ಬೋಲ್ಟ್ ಹೆಸರಿನಲ್ಲಿ ಶ್ರೀನಿವಾಸ್ ಅವರ ಸಾಧನೆ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅಲ್ಲದೆ ಟ್ವೀಟ್ ಮಾಡುವವರೆಲ್ಲ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ದೇಶದ ಪ್ರತಿಷ್ಠಿತ ಉದ್ಯಮಿ ಆನಂದ್ ಮಹೀಂದ್ರ ಕೂಡ ಕಂಬಳದ ಓಟಗಾರನಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವಂತೆ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆನಂದ್ ಮಹೀಂದ್ರ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು, ನಾನು ಕರ್ನಾಟಕದ ಶ್ರೀನಿವಾಸ್ ಗೌಡ ಅವರಿಗೆ ಕರೆ ಮಾಡಿ ಟ್ರಯಲ್ಸ್ ನಡೆಸಲು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (SAI) ಉನ್ನತ ಕೋಚ್‌ಗಳಿಗೆ ತಿಳಿಸಿದ್ದೇನೆ. ಒಲಿಂಪಿಕ್ಸ್‌ನ ಮಾನದಂಡಗಳು ಬಗ್ಗೆ ಹಾಗೂ ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವ ಶಕ್ತಿ ಮತ್ತು ಸಹಿಷ್ಣತೆಯ ವಿಚಾರದಲ್ಲಿ ಸಾಮಾನ್ಯ ಜನರನಲ್ಲಿ ಜ್ಞಾನ ಕಡಿಮೆಯಿದೆ. ಆದರೂ ಭಾರತದ ಯಾವುದೇ ಪ್ರತಿಭೆ ಪರೀಕ್ಷೆಯಾಗದೆ ಉಳಿಯಬಾರದು ಎಂಬುದನ್ನು ನಾನು ಖಚಿತ ಪಡಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.