ಭುವನೇಶ್ವರ (ಒಡಿಶಾ); ಇಲ್ಲಿ ನಡೆದ 2026ರ ಫಿಫಾ ವಿಶ್ವಕಪ್ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಪ್ರಬಲ ಕತಾರ್ ವಿರುದ್ಧ ಭಾರತ ಕಠಿಣ ಪೈಪೋಟಿ ನೀಡಿ 0-3 ಅಂತರದ ಸೋಲು ಅನುಭವಿಸಿತು. ಕಳಿಂಗ ಸ್ಟೇಡಿಯಂನಲ್ಲಿ 90 ನಿಮಿಷಗಳ ಕಾಲದ ಆಟದಲ್ಲಿ ಪ್ರಾಬಲ್ಯ ಸಾಧಸಿದ ಕತಾರ್ ಸಿಕ್ಕ ಹಲವು ಅವಕಾಶಗಳನ್ನು ಕಳೆದುಕೊಳ್ಳದಿದ್ದರೆ ದೊಡ್ಡ ಅಂತರದ ಗೆಲುವನ್ನು ಪಡೆಯಬಹುದಿತ್ತು.
ನಾಲ್ಕು ವರ್ಷಗಳ ಹಿಂದೆ ಇದೇ ಎದುರಾಳಿಗಳ ವಿರುದ್ಧ 0-0 ಯಿಂದ ಡ್ರಾ ಸಾಧಿಸಿತ್ತು. ಅದೇ ಆತ್ಮವಿಶ್ವಾಸದಲ್ಲಿ ಇಂದು ಭಾರತ ಮೈದಾನಕ್ಕಿಳಿದಿತ್ತು. ಅಲ್ಲದೇ, ಕುವೈತ್ ವಿರುದ್ಧ ಮೊದಲ ಅರ್ಹತಾ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆದರೆ ಇಂದಿನ ಪಂದ್ಯದಲ್ಲಿ ನಾಲ್ಕು ವರ್ಷಗಳ ಹಿಂದಿನ ಡಿಫೆನ್ಸ್ ಪ್ರದರ್ಶನವೂ ಬರಲಿಲ್ಲ, ಹಾಗೇ ಮೊದಲ ಪಂದ್ಯದಂತೆ ಗೋಲ್ ಗಳಿಸಲೂ ಸಾಧ್ಯವಾಗಲಿಲ್ಲ. ಇದರಿಂದ ಶೂನ್ಯ ಗೋಲ್ ಗಳಿಸಿ ಸೋಲನುಭವಿಸ ಬೇಕಾಯಿತು. ಆದರೆ ನವೆಂಬರ್ 16 ರಂದು ಕುವೈತ್ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಗೆದ್ದಿರುವ ಕಾರಣ ಮೊದಲ ಬಾರಿಗೆ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದು, ಮೂರನೇ ಸುತ್ತಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ.
ಕತಾರ್ ತಂಡದ ಮೌಸ್ತಫಾ ತಾರೆಕ್ ಮಶಾಲ್ (4ನೇ ನಿಮಿಷ), ಅಲ್ಮಿಯೋಜ್ ಅಲಿ (47ನೇ) ಮತ್ತು ಯೂಸುಫ್ ಅದುರಿಸಾಗ್ (86ನೇ ನಿಮಿಷ) ಗೋಲು ಗಳಿಸುವಲ್ಲಿ ಯಶಸ್ವಿ ಆದರು. ಆರಂಭಿಕ ನಾಲ್ಕನೇ ನಿಮಿಷದಲ್ಲೇ ಕತಾರ್ ತಂಡ ಭಾರತ ರಕ್ಷಣಾ ಕ್ರಮವನ್ನು ಭೇದಿಸಿ ಗೋಲ್ ಗಳಿಸಿದರು. ಆದರೆ ಮೊದಲಾರ್ದ ಮುಗಿಯುವವರೆಗೂ ಭಾರತ ಯಾವುದೇ ಗೋಲನ್ನು ಬಿಟ್ಟುಕೊಡಲಿಲ್ಲ.
ಅಫೀಫ್ ಎರಡನೇ ನಿಮಿಷದಲ್ಲಿ ಕೇವಲ ಭಾರತೀಯ ಗೋಲ್‌ಕೀಪರ್ ಪೋಸ್ಟ್‌ನ ಮುಂದೆ ಗುರಿ ಮುಟ್ಟಲು ವಿಫಲರಾದರು. ಅಲ್ಲದೆ 14, 22 ಮತ್ತು 26ನೇ ನಿಮಿಷದಲ್ಲಿ ಗುರಿ ಮುಟ್ಟಲು ವಿಫಲರಾದರು. ಮೊದಲ ಗೋಲ್ ಮಾಡಿದ ಮಶಾಲ್ ಅವರ ಫ್ರೀ ಹೆಡರ್ ಅನ್ನು ಅಮರಿಂದರ್ ರಕ್ಷಿಸಿದರು. ನಂತರ, ಉದಾಂತ ಸಿಂಗ್ ಮತ್ತು ಅನಿರುದ್ಧ್ ಥಾಪಾ ಅವರು ಸಹ ಎದುರಾಳಿಗೆ ಗೋಡೆಯಂತೆ ನಿಂತು ಗೋಲ್ ಹೋಗದಂತೆ ತಪ್ಪಿಸಿದರು. ಆದರೆ ಲಾಲೆಂಗ್ಮಾವಿಯಾ ರಾಲ್ಟೆ ಒಂದು ಅವಕಾಶವನ್ನು ನಿರ್ಮಿಸಿಕೊಂಡರಾದರೂ ಹೊಡೆತ ಗೋಲ್ನ ಮೂಲೆಗೆ ತಗುಲಿ ಹೊರಕ್ಕೆ ಚಲಿಸಿತು. ಮೊದಲಾರ್ದದಲ್ಲಿ ಭಾರತ ಉತ್ತಮ ರಕ್ಷಣೆಯನ್ನು ಮಾಡಿತು.
ಆದರೆ, ವಿರಾಮ ಕಳೆದು ಬಂದ ಬೆನ್ನಲ್ಲೇ ಕತಾರ್ನ ಅಲ್ಮಿಯೋಜ್ ಅಲಿ ಗೋಲ್ ಪಡೆದುಕೊಂಡರು. ವಿಶ್ರಾಂತಿ ಪಡೆದು ಪಂದ್ಯಕ್ಕೆ ಮರಳಿ ಎರಡೇ ನಿಮಿಷ ಆಗಿತ್ತು ಅಷ್ಟರಲ್ಲಿ ಮತ್ತೊಂದು ಗೋಲ್ ದಾಖಲಾಗಿ 2-0ಯಿಂದ ಕತಾರ್ ಮುನ್ನಡೆಯನ್ನು ಪಡೆದುಕೊಂಡಿತ್ತು. ಅಲಿ ಕತಾರ್ ಹಿಂದಿನ ಪಂದ್ಯದಲ್ಲಿ ಅಫ್ಘನ್ ವಿರುದ್ಧ ಆಡಿದ್ದಾಗ 4 ಗೋಲ್ಗಳನ್ನು ಗಳಿಸಿದ್ದರು. ಅಬ್ದುಲ್ ಸಮದ್ ಭಾರತದ ಖಾತೆ ತೆರೆಯುತ್ತಾರೆ ಎನ್ನುವಂತೆ ಗೋಲ್ ಬುಡಕ್ಕೆ ತಲುಪಿದರು. ಆದರೆ, ಅಂಕ ಪಡೆಯುವಲ್ಲಿ ವಿಫಲರಾದರು. ನಿಗದಿತ ಸಮಯದಿಂದ ನಾಲ್ಕು ನಿಮಿಷಗಳ ಮುನ್ನ ಕತಾರ್ ಮತ್ತೊಂದು ಗೋಲ್ ಪಡೆದು 3-0ಯಿಂದ ಗೆದ್ದು ಬೀಗಿತು.
ಮುಂದೆ ಭಾರತ ಮುಂದಿನ ವರ್ಷ ಮಾರ್ಚ್ 21 ರಂದು ತಜಕಿಸ್ತಾನದ ದುಶಾನ್ಬೆಯ ತಟಸ್ಥ ಸ್ಥಳದಲ್ಲಿ ಅಫ್ಘಾನಿಸ್ತಾನದ ವಿರುದ್ಧ 2026ರ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡುತ್ತದೆ.
ಇದನ್ನೂ ಓದಿ:'ಭಾರತ ವಿಶ್ವಕಪ್ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ