ದೋಹಾ (ಕತಾರ್): ಫುಟ್ಬಾಲ್ನ ವಿಶ್ವಶ್ರೇಷ್ಟ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಘಾನಾ ವಿರುದ್ದ 3-2 ಗೋಲುಗಳ ಅಂತರದಲ್ಲಿ ಗೆಲುವಿನ ಕೇಕೆ ಹಾಕಿತು. ಮೊದಲಾರ್ಧದಲ್ಲಿ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಕಷ್ಟು ಅವಕಾಶ ಸಿಕ್ಕಿತ್ತು. ಆದರೆ, ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದು ಚೆಂಡು ಗೋಲ್‌ಪೋಸ್ಟ್ ಸೇರಲಿಲ್ಲ.
ಆದರೆ, 65ನೇ ನಿಮಿಷದ ಪೆನಾಲ್ಟಿಯೊಂದಿಗೆ ರೊನಾಲ್ಡೊ ದಾಖಲಿಸಿದ ಮೊದಲ ಗೋಲು ಪೋರ್ಚುಗಲ್‌ಗೆ 1-0 ಅಂತರದ ಮುನ್ನಡೆ ತಂದುಕೊಟ್ಟಿತು. ಮುಂದಿನ ಎಂಟು ನಿಮಿಷಗಳ ಅವಧಿಯಲ್ಲಿ ಸಿಕ್ಕ ಪೆನಾಲ್ಟಿಯನ್ನು ಘಾನಾ ಆಟಗಾರ ಆಂಡ್ರೆ ಅಯೆವ್ ಅವರು ಗೋಲ್ ಪೋಸ್ಟ್ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಂದ್ಯವನ್ನು 1-1 ಸಮ ಮಾಡಿದರು. ತಕ್ಷಣವೇ 78ನೇ ನಿಮಿಷದಲ್ಲಿ ಜೋವೊ ಫೆಲಿಕ್ಸ್ ಮತ್ತು ಬದಲಿ ಆಟಗಾರ ರಾಫೆಲ್ ಲಿಯೊ 80ನೇ ನಿಮಿಷದಲ್ಲಿ ಮತ್ತೆರಡು ಗೋಲು ದಾಖಲಿಸುವ ಮೂಲಕ ಪೋರ್ಚುಗಲ್‌ಗೆ ಗೆಲುವು ಖಚಿತಪಡಿಸಿದರು.
ಈ ಮುನ್ನಡೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಒಸ್ಮಾನ್ ಬುಕಾರಿ ಕೊನೆಯ 89ನೇ ನಿಮಿಷದಲ್ಲಿ ಗೋಲು ಹೊಡೆದು ಘಾನಾದ ಆತ್ಮವಿಶ್ವಾಸ ಹೆಚ್ಚಿಸಿದರು. ಆದರೂ, ಅಂತಿಮವಾಗಿ ಘಾನಾ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿತು. ಪಂದ್ಯದ ಎಲ್ಲಾ ಗೋಲುಗಳು ಆಟದ ಕೊನೆಯ ಅರ್ಧ ಗಂಟೆಯಲ್ಲಿ ದಾಖಲಾಗಿದ್ದು ವಿಶೇಷವಾಗಿತ್ತು.