ಅಲ್ ಖೋರ್(ಕತಾರ್):ನಿರೀಕ್ಷಿತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಫ್ರಾನ್ಸ್, 2ನೇ ಸೆಮಿಫೈನಲ್ನಲ್ಲಿ ಮೊರಾಕ್ಕೊವನ್ನು 2-0 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಈಗಾಗಲೇ ಫೈನಲ್ಗೇರಿರುವ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಪ್ರಶಸ್ತಿಗಾಗಿ ಫ್ರಾನ್ಸ್ ಅಂತಿಮ ಹಣಾಹಣಿ ನಡೆಸಲಿದೆ.
ಇಲ್ಲಿನ ಅಲ್ ಬೇತ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಥಿಯೋ ಹೆರ್ನಾಂಡೆಜ್ ಮತ್ತು ರಾಂಡಾಲ್ ಕೊಲೊ ಮೌನಿ ಗಳಿಸಿದ ತಲಾ ಒಂದು ಗೋಲುಗಳು, ಮೊದಲ ಬಾರಿಗೆ ಫೈನಲ್ಗೇರಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಮೊರಾಕ್ಕೊ ಕನಸಿಗೆ ನೀರೆರಚಿದವು. ಹಾಲಿ ಚಾಂಪಿಯನ್ ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಐದೇ ನಿಮಿಷದಲ್ಲಿ ಮೊದಲ ಗೋಲು:ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್, ಮೊರಾಕ್ಕೊ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿತು. ಐದನೇ ನಿಮಿಷದಲ್ಲಿ ಆಂಟೊಯಿನ್ ಗ್ರೀಜ್‌ಮನ್ ನೀಡಿದ ಪಾಸ್ ಅನ್ನು ಕೈಲಿಯನ್ ಎಂಬಪ್ಪೆ ಗೋಲು ಮಾಡುವಲ್ಲಿ ಅಲ್ಪದರಲ್ಲೇ ತಪ್ಪಿಸಿಕೊಂಡರು. ಮರುಕ್ಷಣದಲ್ಲೇ ಥಿಯೋ ಹೆರ್ನಾಂಡೆಜ್ ಗೋಲಿನ ಎಡಭಾಗದಿಂದ ಬಾರಿಸಿದ ಚೆಂಡು ಆಟಗಾರರನ್ನು ಬೇಧಿಸಿ ಕಂಬಕ್ಕೆ ಬಡಿದು ಬಲೆ ಸೇರಿತು. 5 ನಿಮಿಷದಲ್ಲಿ ಗೋಲು ಗಳಿಸಿದ ಫ್ರಾನ್ಸ್ 1-0 ಮುನ್ನಡೆ ಪಡೆದುಕೊಂಡಿತು.
ಇದರ ನಂತರ ತುಂಬಾ ಚುರುಕಾದ ಮೊರಾಕ್ಕೊ ಗೋಲು ಗಳಿಸಲು ಶತಪ್ರಯತ್ನ ನಡೆಸಿತು. ಆದರೆ, ಅಂತಿಮ ಕ್ಷಣಗಳಲ್ಲಿ ಮಾಡಿದ ತಪ್ಪಿನಿಂದಾಗಿ ನಿರಾಸೆ ಅನುಭವಿಸಿತು. ಗೋಲು ಗಳಿಸುವ ಭರದಲ್ಲಿ ಸೋಫಿಯಾನೆ ಬೌಫಲ್ ಫೌಲ್ ಮಾಡಿದ್ದರಿಂದ ರೆಫ್ರಿ ಹಳದಿ ಕಾರ್ಡ್ ತೋರಿಸಿದರು. ಪ್ರಥಮಾರ್ಧದಲ್ಲಿ ಫ್ರಾನ್ಸ್ ಪೂರ್ಣ ಪಾರಮ್ಯ ಮೆರೆಯಿತು.