ಬ್ರಸೆಲ್ಸ್:ತಮ್ಮ ದೇಶದ ತಂಡ ಗೆದ್ದಾಗ ಬಹುಪರಾಕ್ ಹೇಳಿ ಮೆರೆಸುವ ಅಭಿಮಾನಿಗಳು, ಸೋತಾಗ ಅಸಂತುಷ್ಟತೆ ತೋರಿಸುವುದು ಸಹಜ. ಫಿಫಾ ವಿಶ್ವಕಪ್ನಲ್ಲಿ ನಿನ್ನೆ ರಾತ್ರಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಮೊರಾಕ್ಕೊ ಸೆಮಿಫೈನಲ್ ಸೋಲು ಅನುಭವಿಸಿದ್ದು, ಇದು ಆಫ್ರಿಕನ್ ಅಭಿಮಾನಿಗಳಿಗೆ ನೋವು ತಂದಿದೆ. ಉದ್ರಿಕ್ತ ಅಭಿಮಾನಿಗಳು ಬ್ರಸೆಲ್ಸ್ನಲ್ಲಿ ಪೊಲೀಸರ ಜೊತೆ ಕಿತ್ತಾಡಿ ದಾಂಧಲೆ ಎಬ್ಬಿಸಿದ್ದಾರೆ.
0-2 ಗೋಲುಗಳಿಂದ ಸೋತು ಫೈನಲ್ ತಲುಪುವಲ್ಲಿ ಮೊರಾಕ್ಕೊ ಫುಟ್ಬಾಲ್ ತಂಡ ವಿಫಲವಾದ ಕಾರಣ ರೊಚ್ಚಿಗೆದ್ದ 100 ಕ್ಕೂ ಅಧಿಕ ಅಭಿಮಾನಿಗಳು ಬ್ರಸೇಲ್ಸ್ನ ರಸ್ತೆಗಳಿಗೆ ಬಂದು ಗಲಾಟೆ ಆರಂಭಿಸಿದ್ದಾರೆ. ಇದನ್ನು ತಡೆಯಲು ಬಂದ ಪೊಲೀಸರ ಮೇಲೂ ಅಭಿಮಾನಿಗಳು ದಾಳಿ ನಡೆಸಿದ್ದಾರೆ.
ಸಂಭ್ರಮಿಸಲು ತಂದಿದ್ದ ಪಟಾಕಿಗಳನ್ನು ಖಾಕಿ ಪಡೆಯ ಮೇಲೆ ಬಿಸಾಡಿದ್ದಾರೆ. ಬಳಿಕ ಸಿಕ್ಕ ಸಿಕ್ಕ ವಸ್ತುಗಳಿಂದ ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಬಳಿಕ ಹಲವಾರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಕೆಲ ಸಮಯದ ಬಳಿಕ ಎಲ್ಲರನ್ನು ಚದುರಿಸಿ ಶಾಂತಿ ಸ್ಥಾಪಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.