ಅಲ್ ಖೋರ್(ಕತಾರ್):ಅಲ್ ಖೋರ್‌ನಲ್ಲಿರುವ ಅಲ್ ಬೈಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ವಿರುದ್ಧ ಈಕ್ವೆಡಾರ್ 2-0 ಗೋಲುಗಳ ಅಂತರ ಗೆಲುವಿನ ನಗೆ ಬೀರಿತು. ಈಕ್ವೆಡಾರ್ ನಾಯಕ ಎನ್ನರ್ ವೇಲೆನ್ಸಿಯಾ ಎರಡು ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಕತಾರ್ ವಿರುದ್ಧ ದಕ್ಷಿಣ ಅಮೆರಿಕನ್ನರು ಪ್ರಾಬಲ್ಯ ಸಾಧಿಸಿದ್ದು, ಪೆನಾಲ್ಟಿ ಕಿಕ್ ಮೂಲಕ ಈ ವಿಶ್ವಕಪ್‌ನ ಆರಂಭಿಕ ಗೋಲು ಮೂಡಿಬಂದಿರುವುದು ವಿಶೇಷವಾಗಿತ್ತು. ನಾಯಕ ಎನ್ನರ್ ವೆಲೆನ್ಸಿಯಾ ಟೂರ್ನಿಗೆ ಅದ್ಧೂರಿ ಆರಂಭ ಸಿಕ್ಕ ಬೆನ್ನಲ್ಲೇ ಪಂದ್ಯ ಆರಂಭವಾದ ಮೂರು ನಿಮಿಷಗಳಲ್ಲೇ ಚೆಂಡನ್ನು ಗೋಲಿನತ್ತ ಬಾರಿಸಿ ಗಳಿಸಿ ಕ್ರೀಡಾಂಗಣಕ್ಕೆ ಕಿಚ್ಚು ಹಚ್ಚಿದ್ದರು.
ಸ್ಟ್ರೈಕರ್ ಫೆಲಿಕ್ಸ್ ಟೊರೆಸ್ ಅವರ ಕಿಕ್‌ನಿಂದ ಬಂದ ಚೆಂಡನ್ನು ಮತ್ತು ನೆಟ್ನತ್ತ ತಳ್ಳುವ ಮೂಲಕ ಈಕ್ವೆಡಾರ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣಗಿದ್ದರು. ಆದರೆ ರೆಫರಿ ಗೋಲು ಆಫ್ ಸೈಡ್ ಎಂದು ತೀರ್ಪು ನೀಡಿದ್ದರಿಂದ ಸಂಭ್ರಮಾಚರಣೆ ಅಲ್ಪಕಾಲಿಕವಾಗಿತ್ತು. ಬಳಿಕ ವಿಎಆರ್ (VAR) ಪರಿಶೀಲನೆಯಿಂದ ಗೋಲು ಆಫ್-ಸೈಡ್ ಎಂದು ದೃಢಪಟ್ಟಿತ್ತು.
ಒಂದೆಡೆ ಕತಾರ್ ಆಟಗಾರರು ಚೆಂಡನ್ನು ಬೆನ್ನಟ್ಟುತ್ತಿದ್ದರೆ, ಈಕ್ವೆಡಾರ್ ಕೂಡ ಆಕ್ರಮಣಕಾರಿ ಆಟ ಮುಂದುವರೆಸಿತು. ಬಳಿಕ ವೇಲೆನ್ಸಿಯಾ ಪಂದ್ಯದ 16ನೇ ನಿಮಿಷದಲ್ಲಿ ಅಮೋಘ ಆಟದಿಂದ ಗೋಲಿನತ್ತ ಮುಖ ಮಾಡಿದ್ದರಾದರೂ ಕತಾರ್‌ನ ಗೋಲ್‌ಕೀಪರ್ ಅಲ್ ಶೀಬ್ ಟ್ಯಾಕಲ್ ಮೂಲಕ ತಡೆದರು.
ಇದನ್ನೂ ಓದಿ:ಫಿಫಾ ವಿಶ್ವಕಪ್ ಹಬ್ಬ: ಕತಾರ್‌ನಲ್ಲಿ ಪ್ರತಿಧ್ವನಿಸಲಿದೆ ಭಾರತೀಯ ಪ್ರತಿಭೆಯ ಮಧುರ ಧ್ವನಿ
ಇದರಿಂದ ಕತಾರ್‌ನ ಗೋಲ್‌ಕೀಪರ್ ಶೀಬ್‌ಗೆ ಹಳದಿ ಕಾರ್ಡ್ ನೀಡಲಾಯಿತಲ್ಲದೆ, ಟ್ಯಾಕಲ್‌ಗಾಗಿ ಈಕ್ವೆಡಾರ್‌ಗೆ ಪೆನಾಲ್ಟಿ ಲಭಿಸಿತು. ಆಗ ಪೆನಾಲ್ಟಿ ಕಿಕ್ ಬಾಚಿಕೊಂಡ ಈಕ್ವೆಡಾರ್ ನಾಯಕ, ಚೆಂಡನ್ನು ಬಲ ಕೆಳಗಿನ ಮೂಲೆಯತ್ತ ಬಾರಿಸಿ, ವೃತ್ತಿಜೀವನದ ನಾಲ್ಕನೇ ವಿಶ್ವಕಪ್ ಗೋಲು ಗಳಿಸಿ ಸಂಭ್ರಮಿಸಿದರು. ಅಲ್ಲದೆ, ಆತಿಥೇಯ ಕತಾರ್ ವಿರುದ್ಧ ಈಕ್ವೆಡಾರ್‌ಗೆ 1-0 ಮುನ್ನಡೆ ಒದಗಿಸಿದರು.
ಇದಾದ ಬಳಿಕ ಕತಾರ್ ಆಟಗಾರರು ದಕ್ಷಿಣ-ಅಮೆರಿಕನ್ ತಂಡದ ವಿರುದ್ಧ ಪರದಾಡಿದರು. ತಂಡವು ನಿರಂತರವಾಗಿ ಪಂದ್ಯದ ಮೇಲಿನ ಹಿಡಿತ ಕಳೆದುಕೊಳ್ಳುತ್ತ ಸಾಗಿತು. ಚೆಂಡನ್ನು ಸರಾಗವಾಗಿ ರವಾನಿಸಲು ವಿಫಲರಾದರು. ಈ ವೇಳೆ ಈಕ್ವೆಡಾರ್ ನಾಯಕನನ್ನು ತಡೆದಿದ್ದಕ್ಕಾಗಿ ಕತಾರ್ಗೆ ಮತ್ತೊಂದು ಹಳದಿ ಕಾರ್ಡ್ ಎಚ್ಚರಿಕೆ ಎದುರಿಸಬೇಕಾಯಿತು. ಕತಾರ್‌ನ ಅಲ್ಮೋಜ್ ಅಲಿಗೆ ಹಳದಿ ಕಾರ್ಡ್ ಎಚ್ಚರಿಕೆ ನೀಡಲಾಯಿತು.