ಅಲ್ರಯ್ಯಾನ್(ಕತಾರ್):ಯುರೋಪಿಯನ್ ಬಲಿಷ್ಠ ತಂಡವಾದ ಜರ್ಮನಿಯನ್ನು ಸೋಲಿಸಿದ್ದ ಏಷ್ಯಾ ಉಪಖಂಡದ ಜಪಾನ್ ಕೋಸ್ಟರಿಕಾ ವಿರುದ್ಧ ಸೋಲು ಕಂಡಿತು. ಕಳೆದ ಪಂದ್ಯವನ್ನು ಸೋತಿದ್ದ ಕೋಸ್ಟರಿಕಾ ಇಂದು 1-0 ಗೋಲಿನಿಂದ ಜಪಾನ್ ಮಣಿಸಿ ಗ್ರೂಪ್ ಇ ಪಟ್ಟಿಯಲ್ಲಿ 3 ಅಂಕ ಪಡೆದುಕೊಂಡಿತು.
ರೋಚಕ ಪಂದ್ಯದಲ್ಲಿ ಕೊನೆಯವರೆಗೂ ಗೋಲು ಗಳಿಸಲು ಉಭಯ ತಂಡಗಳು ಭಾರಿ ಸಾಹಸ ಮಾಡಿದವು. ಪಂದ್ಯ ಮುಗಿಯಲು 9 ನಿಮಿಷ ಬಾಕಿ ಇರುವಾಗ (81 ನೇ ನಿಮಿಷ) ಕೋಸ್ಟರಿಕಾ ತಂಡದ ಕೀಷರ್ ಫುಲ್ಲರ್ ಗೋಲು ಬಾರಿಸಿ ಕ್ರೀಡಾಂಗಣದ ತುಂಬೆಲ್ಲಾ ಮೆರೆದಾಡಿದರು. ಜಪಾನ್ನ ಗೋಲ್ಕಿಪರ್ ಶುಚಿ ಗೊಂಡಾರ ತಡೆಗೋಡೆಯನ್ನು 18 ಮೀಟರ್ ದೂರದಿಂದಲೇ ಬೇಧಿಸಿದ ಕೀಷರ್ ಚೆಂಡನ್ನು ಗುರಿ ಮುಟ್ಟಿಸಿದರು.
ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೋಲು ಗಳಿಸಿ ಗೆಲುವು ಸಾಧಿಸಿದಾಗ್ಯೂ ಕೋಸ್ಟರಿಕಾ ಮತ್ತು ಜಪಾನ್ ತಂತ್ರಗಾರಿಕೆ ಮೆರೆಯುವಲ್ಲಿ ವಿಫಲವಾದವು. ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಉಭಯ ಆಟಗಾರರು ಚಾಕಚಕ್ಯತೆ ಮೆರೆಯಲಿಲ್ಲ. ಮೊದಲಾರ್ಧದಲ್ಲಿ ಚೆಂಡನ್ನು ಗೋಲಿನ ಬಲೆಗೆ ಸೇರಿಸುವವ ಯತ್ನದಲ್ಲಿ ಎರಡೂ ತಂಡಗಳ ಆಟಗಾರರು ವೈಫಲ್ಯ ಕಂಡರು.