ಅಲ್ ದಾಯೆನ್ (ಕತಾರ್):ಕತಾರ್ ಫಿಫಾ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ತವರು ತಂಡವಾದ ಸೌದಿ ಅರೇಬಿಯಾ ವಿರುದ್ಧ ಸೋತಾಗ ವಿಶ್ವಶ್ರೇಷ್ಠ ತಂಡವಾದ ಅರ್ಜೆಂಟೀನಾವನ್ನು ಗೇಲಿ ಮಾಡಿದವರೇ ಹೆಚ್ಚು. ಲಿಯೋನೆಲ್ ಮೆಸ್ಸಿಯಂತಹ ಈ ಪೀಳಿಗೆಯ ಶ್ರೇಷ್ಠ ಆಟಗಾರರಿರುವ ತಂಡ ಹೀನಾಯವಾಗಿ ಸೋತಿದ್ದು, ಯಾರಿಂದಲೂ ಅರಗಿಸಿಕೊಳ್ಳಲಾಗಲಿಲ್ಲ.
ಮೊದಲ ಸೋಲು ತಂಡದ ತಂತ್ರಗಳನ್ನೇ ಬದಲಿಸಿತು. ವಿಶ್ವಕಪ್ ಗೆದ್ದು ತೋರಿಸುವ ಛಲ ತೊಟ್ಟ ಆಟಗಾರರು ವಿಶ್ವಕಪ್ ಗೆಲ್ಲಲೇಬೇಕೆಂಬ ಹಠದೊಂದಿಗೆ ಕಾಲ್ಚೆಂಡಿನ ಜೊತೆ ಹಠಕ್ಕೆ ಬಿದ್ದು ಹೋರಾಡಿದರು. ಅದರ ಫಲಿತಾಂಶವೇ ಇಂದು ಅರ್ಜೆಂಟೀನಾ ವಿಶ್ವಕಪ್ನ ಮೊದಲ ತಂಡವಾಗಿ ಪೈನಲ್ ತಲುಪಿದೆ. ಅಚ್ಚರಿಗಳನ್ನೇ ಸೃಷ್ಟಿಸುತ್ತ ಬಂದಿದ್ದ ಕ್ರೊವೇಷಿಯಾ ಎದುರು ಮಧ್ಯರಾತ್ರಿ ನಡೆದ ಪಂದ್ಯದಲ್ಲಿ 3-0 ಗೋಲುಗಳಿಂದ ಗೆದ್ದು ಅಂತಿಮ ಹಣಾಹಣಿಗೆ ಅರ್ಹತೆ ಪಡೆಯಿತು.
ಬಹುತೇಕ ಅಂತಿಮ ವಿಶ್ವಕಪ್ ಆಡುತ್ತಿರುವ ಲಿಯೋನೆಲ್ ಮೆಸ್ಸಿ 34 ನೇ ನಿಮಿಷದಲ್ಲಿ ಬಾರಿಸಿದ ಗೋಲು, ತಂಡದ ಭರವಸೆಯ ಆಟಗಾರ ಜೂಲಿಯನ್ ಅಲ್ವಾರೆಜ್ ಬ್ರೇಸ್ 39, 69 ನೇ ನಿಮಿಷದಲ್ಲಿ ದಾಖಲಿಸಿದ ಎರಡುಗಳ ಗೋಲುಗಳು ಕ್ರೊವೇಷಿಯಾದ ಫೈನಲ್ ಹಾದಿಯನ್ನು ಮುಚ್ಚಿ ಹಾಕಿತು. ಬೆಲ್ಜಿಯಂ, ಬ್ರೆಜಿಲ್ನಂಹ ದಿಗ್ಗಜ ತಂಡಗಳನ್ನು ಮಣ್ಣುಮುಕ್ಕಿಸಿದ್ದ 2018 ರ ರನ್ನರ್ ಅಪ್ ಕ್ರೊವೇಷಿಯಾ 2014 ರ ರನ್ನರ್ ಅಪ್ ಅರ್ಜೆಂಟೀನಾದ ಮುಂದೆ ಬಾಲಬಿಚ್ಚಲಿಲ್ಲ.
ಕ್ರೊವೇಷಿಯಾ ಸೋಲಿಗೆ ಮೆಸ್ಸಿ ಮುನ್ನುಡಿ:ಆಟ ಆರಂಭವಾದ ಅರ್ಧಗಂಟೆಯಲ್ಲಿ ಹಲವು ಬಾರಿ ಗೋಲು ಗಳಿಸಲು ಸೆಣಸಾಟ ನಡೆಸಿದ ಉಭಯ ತಂಡಗಳು ಯಶ ಕಾಣಲಿಲ್ಲ. ಕ್ರೊವೇಷಿಯಾದ ಡೊಮಿನಿಕ್ ಲಿವಾಕೊವಿಕ್ ತಪ್ಪು ಮಾಡಿ ಎದುರು ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದರು. ಪೆನಾಲ್ಟಿ ಅವಕಾಶ ಪಡೆದ ಅರ್ಜೆಂಟೀನಾ ತನ್ನ ಅನುಭವವೆಲ್ಲ ಧಾರೆ ಎರೆದು 34 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದು ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೇ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.