ದೋಹಾ(ಕತಾರ್):ಕತಾರ್ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಫ್ರಾನ್ಸ್ ಗೆಲ್ಲುವ ಮೂಲಕ ಸೆಮಿಫೈನಲ್ ತಂಡಗಳು ಯಾವೆಂಬ ನಿಖರತೆ ಹೊರಬಿದ್ದಿದೆ. ಈಗಾಗಲೇ ಅರ್ಜೆಂಟೀನಾ, ಕ್ರೊವೇಷಿಯಾ ಮೊದಲೆರಡು ತಂಡಗಳಾಗಿ ಎಂಟ್ರಿ ಕೊಟ್ಟಿದ್ದರೆ, ನಿನ್ನೆ ರಾತ್ರಿ ನಡೆದ ಪಂದ್ಯಗಳಲ್ಲಿ ಗೆದ್ದ ಮೊರಾಕ್ಕೊ, ಫ್ರಾನ್ಸ್ ಸೆಮೀಸ್ಗೆ ತಲುಪಿವೆ.
ಸೆಮೀಸ್ ತಲುಪಿದ ಮೊದಲ ತಂಡವಾದ ಅರ್ಜೆಂಟೀನಾ ಕ್ರೊವೇಷಿಯಾ ವಿರುದ್ಧ ಡಿಸೆಂಬರ್ 14 ರಂದು ನಡೆಯುವ ಮೊದಲ ಹೋರಾಟದಲ್ಲಿ ಸೆಣಸಾಡಿದರೆ, ಮರುದಿನ ನಡೆಯುವ ಎರಡನೇ ಸೆಮೀಸ್ನಲ್ಲಿ ಫ್ರಾನ್ಸ್ ಮತ್ತು ಮೊರಾಕ್ಕೊ ಅಂತಿಮ ಸುತ್ತಿಗಾಗಿ ಸೆಣಸಾಡಲಿವೆ.
ಕ್ವಾರ್ಟರ್ಫೈನಲ್ನ ಮೊದಲೆರಡು ಪಂದ್ಯಗಳಲ್ಲಿ ಪೈಪೋಟಿ ನಡೆಸಿದ ಕ್ರೊವೇಷಿಯಾ ಮತ್ತು ಬ್ರೆಜಿಲ್, ಅರ್ಜೆಂಟೀನಾ ಮತ್ತು ನೆದರ್ಲ್ಯಾಂಡ್ಸ್ ಪಂದ್ಯಗಳು ಪೆನಾಲ್ಟಿ ಕಾರ್ನರ್ ಮೂಲಕ ಫಲಿತಾಂಶ ಪಡೆದರೆ, ಮೊರಾಕ್ಕೊ-ಪೋರ್ಚುಗಲ್, ಇಂಗ್ಲೆಂಡ್-ಫ್ರಾನ್ಸ್ ತಂಡಗಳು ನಿಗದಿತ ಸಮಯದಲ್ಲೇ ಗೆಲ್ಲುವ ಮೂಲಕ ನೇರವಾಗಿ ಅರ್ಹತೆ ಪಡೆದಿವೆ.
ತಂಡಗಳ ಬಲಾಬಲ:ಕೊನೆಯ ವಿಶ್ವಕಪ್ ಆಡುತ್ತಿರುವ ವಿಶ್ವಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು. ಬಳಿಕ ಪುಟಿದೆದ್ದ ತಂಡ ನಂತರದ ಎಲ್ಲ ಪಂದ್ಯಗಳಲ್ಲಿ ಪಾರಮ್ಯ ಮೆರೆದು ಸೆಮೀಸ್ ಪ್ರವೇಶಿಸಿತು. ಇನ್ನು, ಪ್ರಬಲ ಹೋರಾಟ ನಡೆಸಿದ ಕ್ರೊವೇಷಿಯಾ ಗುಂಪು ಹಂತದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇದು ಅರ್ಜೆಂಟೀನಾಗೆ ಎಚ್ಚರಿಕೆಯ ಗಂಟೆಯೂ ಹೌದು.