ದೋಹಾ (ಕತಾರ್):ಕತಾರ್ನಲ್ಲಿ ಚಾಲ್ತಿಯಲ್ಲಿರುವ ಫಿಫಾ ವಿಶ್ವಕಪ್ನಲ್ಲಿ ದೈತ್ಯ ತಂಡಗಳಿಗೆ ಉಳಿಗಾಲವಿಲ್ಲ ಎಂಬಂತಾಗಿದೆ. ಅರ್ಜೆಂಟೀನಾ, ಕ್ರೊವೇಷಿಯಾ ತಂಡಗಳು ಶಾಕ್ ಅನುಭವಿಸಿದ ಬೆನ್ನಲ್ಲೇ 4 ಬಾರಿಯ ವಿಶ್ವ ಚಾಂಪಿಯನ್ ಜರ್ಮನಿಗೆ ಏಷ್ಯಾ ಖಂಡದ ಫುಟ್ಬಾಲ್ ತಂಡ ಜಪಾನ್ ಬರೆ ಎಳೆದಿದೆ.
ದೋಹಾದ ಖಲೀಫಾ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆದ ಗ್ರೂಪ್ ಇ ಸೆಣಸಾಟದಲ್ಲಿ ಯುರೋಪಿಯನ್ ದೈತ್ಯ ತಂಡ ಜರ್ಮನಿಯನ್ನು ಜಪಾನ್ ತಂಡ 2-1 ಗೋಲುಗಳಿಂದ ಸೋಲಿಸಿದೆ. ಇದು ಈ ವಿಶ್ವಕಪ್ನ ಮೂರನೇ ಅಚ್ಚರಿಯ ಫಲಿತಾಂಶವಾಗಿದೆ.
4 ಬಾರಿಯ ವಿಶ್ವಕಪ್ ಚಾಂಪಿಯನ್ ಜರ್ಮನಿ ಮೊದಲಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. 33ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಇಲ್ಕೆ ಗುಂಡೋಗನ್ ಗೋಲಾಗಿ ಪರಿವರ್ತಿಸುವ ಮೂಲಕ ಜರ್ಮನಿಗೆ 1-0 ಮುನ್ನಡೆ ತಂದು ಕೊಟ್ಟರು.
2 ನೇ ಅವಧಿಯಲ್ಲಿ ತಿರುಗಿಬಿದ್ದ ಜಪಾನ್:ಮೊದಲ ಅವಧಿಯಲ್ಲಿ ಜರ್ಮನಿ ಆಟಗಾರರ ಕಾಲ್ಚಳಕದ ಮುಂದೆ ಬಸವಳಿದ ಜಪಾನಿಯರು ದ್ವಿತೀಯಾರ್ಧದಲ್ಲಿ ಸೆಟೆದು ನಿಂತು ಚುರುಕಿನ ಆಟವಾಡಿದರು. 8 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಪಂದ್ಯವನ್ನು ಗೆದ್ದರು.
2ನೇ ಅವಧಿಯ 75ನೇ ನಿಮಿಷದಲ್ಲಿ ಜಪಾನಿನ ರಿತ್ಸು ದೋಸನ್ ಜರ್ಮನಿಯ ಭದ್ರಕೋಟೆಯಲ್ಲಿ ಭೇದಿಸಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿ 1-1 ರ ಸಮಬಲ ಸಾಧಿಸುವಂತೆ ಮಾಡಿದರು. ಮ್ಯಾನುಯೆಲ್ ನ್ಯೂಯರ್ ನೀಡಿದ ಅದ್ಭುತ ಪಾಸ್ ಅನ್ನು ವ್ಯರ್ಥ ಮಾಡದ ರಿತ್ಸು ದೋಸನ್ ಜರ್ಮನಿಯ ಗೋಲ್‌ಕೀಪರ್ ಟಕುಮಿ ಮಿನಾಮಿನೊ ಅವರನ್ನು ಯಾಮಾರಿಸಿ ಗೋಲು ಗಳಿಸಿದರು.
ಬಳಿಕ 8 ನಿಮಿಷಗಳ ಅಂತರದಲ್ಲಿ ಅಂದರೆ 83ನೇ ನಿಮಿಷದಲ್ಲಿ ಜಪಾನಿನ ಟಕುಮಾ ಅಸಾಮೊ ಗೋಲು ಗಳಿಸಿದರು. ಇದು ಜರ್ಮನಿಗೆ ಮರ್ಮಾಘಾತ ನೀಡಿತು. ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಲು ಯತ್ನಿಸಿ ಕೊನೆಗೆ ಗೋಲು ಗಳಿಸಲಾಗದೇ ಸೋಲು ಕಂಡಿತು. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಉಭಯ ತಂಡಗಳು ವಿಶ್ವಕಪ್ನಲ್ಲಿ ಮುಖಾಮುಖಿಯಾಗಿವೆ. ಮೊದಲ ಸೆಣಸಾಟದಲ್ಲೇ ಜಪಾನ್ ಯಶಸ್ಸು ಕಂಡಿತು.
ಓದಿ:ಫಿಫಾ ವಿಶ್ವಕಪ್: ಮತ್ತೊಂದು ಅಚ್ಚರಿಯ ಫಲಿತಾಂಶ, ಮೊರಾಕ್ಕೊ ಕ್ರೊವೇಷಿಯಾ ಪಂದ್ಯ ಡ್ರಾ