ದೋಹಾ(ಕತಾರ್):ಕ್ರಿಶ್ಚಿಯಾನೊ ರೊನಾಲ್ಡೊ ಈ ಪೀಳಿಗೆಯ ವಿಶ್ವಶ್ರೇಷ್ಠ ಫುಟ್ಬಾಲಿಗ. ಚಿರತೆ ವೇಗವೇ ಆತನ ಬಲ. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವೆಂಬ ಗೋಲುಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ ಆಟಗಾರನಿಗೆ ಫಿಫಾ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದೆ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ, ತಾವಾಡಿದ 5 ವಿಶ್ವಕಪ್ಗಳಲ್ಲಿ ಗಳಿಸಿದ 8 ಗೋಲುಗಳ ವಿಡಿಯೋವನ್ನು ಫಿಫಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಒಬ್ರಿಗಾಡ್(ಧನ್ಯವಾದ) ಅರ್ಪಿಸಿತು. ರೊನಾಲ್ಡೊ 2006 ರಲ್ಲಿ ತಾವಾಡಿದ ಮೊದಲ ವಿಶ್ವಕಪ್ನಲ್ಲಿ ಇರಾನ್ ವಿರುದ್ಧ ಪ್ರಥಮ ಗೋಲು ಗಳಿಸಿದ್ದರು.
2010 ರಲ್ಲಿ ಉತ್ತರ ಕೊರಿಯಾ ವಿರುದ್ಧ ಏಕೈಕ, 2014 ರಲ್ಲಿ ಘಾನಾ ವಿರುದ್ಧ ಒಂದು ಗೋಲು ಬಾರಿಸಿದ್ದರು. ಇದಾದ ಬಳಿಕ 2018 ರಲ್ಲಿ ನಡೆದ ವಿಶ್ವಕಪ್ ರೊನಾಲ್ಡೊರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸ್ಪೇನ್ ವಿರುದ್ಧ ಹ್ಯಾಟ್ರಿಕ್ ಗೋಲು ಮತ್ತು ಮೊರಾಕ್ಕೊ ವಿರುದ್ಧ ಹೆಡ್ಡರ್ ಮೂಲಕ ದಾಖಲಾದ ವಿಶ್ವದಾಖಲೆಯ ಗೋಲೂ ಒಂದಾಗಿದೆ. 2022 ರ ಈ ಸಲದ ವಿಶ್ವಕಪ್ನಲ್ಲಿ ರೊನಾಲ್ಡೊ ಘಾನಾ ವಿರುದ್ಧ ಒಂದು ಗೋಲು ಮಾತ್ರ ಗಳಿಸಿದ್ದಾರೆ.