ಚೆನ್ನೈ: ಇತ್ತೀಚೆಗೆ ನಡೆದ ಫಿಡೆ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಅವರು ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ವೀರೋಚಿತ ಸೆಣಸಾಟ ನಡೆಸಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.
ಇಂದು ತವರಿಗೆ ಆಗಮಿಸಿದ ಚೆಸ್ ಗ್ರ್ಯಾಂಡ್ಮಾಸ್ಟರ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ನಂತರ ಪ್ರಜ್ಞಾನಂದ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಪುತ್ರ ಹಾಗೂ ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಭೇಟಿ ಮಾಡಿದರು. ತಂದೆ ರಮೇಶ್ ಬಾಬು, ತಾಯಿ ನಾಗಲಕ್ಷ್ಮಿ ಮತ್ತು ಕೋಚ್ ಆರ್.ಬಿ.ರಮೇಶ್ ಅವರು ಪ್ರಗ್ಗು ಜೊತೆಗಿದ್ದರು.
ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಪ್ರಗ್ಗುಗೆ ತಮಿಳುನಾಡು ಸರ್ಕಾರದ ವತಿಯಿಂದ ಸ್ಮರಣಿಕೆಯೊಂದಿಗೆ 30 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪ್ರಜ್ಞಾನಂದ, "ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚೆಸ್ ಕ್ರೀಡೆಯನ್ನು ಗುರುತಿಸುವುದನ್ನು ನೋಡಿ ನನಗೆ ತುಂಬಾ ಸಂತೋಷ ಮತ್ತು ಥ್ರಿಲ್ ಆಗುತ್ತಿದೆ. ಚೆಸ್ ದೊಡ್ಡ ಕ್ರೀಡೆಯಾಗಿ ಬೆಳೆಯುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಆನಂದ್ ಮಹೀಂದ್ರಾರಿಂದ ಪ್ರಗ್ಗು ಪೋಷಕರಿಗೆ ಎಲೆಕ್ಟ್ರಿಕ್ ಕಾರು ಗಿಫ್ಟ್: ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಆನಂದ್ ಮಹೀಂದ್ರಾ ಅವರು ತಮ್ಮ ಕಂಪನಿಯ ವಾಹನಗಳನ್ನು ಉಡುಗೊರೆಯಾಗಿ ನೀಡುತ್ತಿರುತ್ತಾರೆ. ಈ ಹಿಂದೆ ಅನೇಕ ಕ್ರೀಡಾಪಟುಗಳಿಗೆ ಕಾರು ಗಿಫ್ಟ್ ನೀಡಿ ಪ್ರೋತ್ಸಾಹಿಸಿದ್ದಾರೆ. ಚೆಸ್ ಸಾಧನೆ ಹಿನ್ನೆಲೆಯಲ್ಲಿ ಅನೇಕರು ಎಕ್ಸ್ ಆ್ಯಪ್ (ಹಿಂದಿನ ಟ್ವಿಟರ್) ಮೂಲಕ ಪ್ರಜ್ಞಾನಂದ ಅವರಿಗೆ ಮಹೀಂದ್ರಾ ಥಾರ್ ವಾಹನ ಕೊಡುಗೆ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ಪ್ರಜ್ಞಾನಂದ ಅವರ ಪೋಷಕರಿಗೆ ಮುಂದಿನ ಪೀಳಿಗೆಯ ಭರವಸೆಯ ವಾಹನ ಎಲೆಕ್ಟ್ರಿಕ್ ಕಾರು ನೀಡುವುದಾಗಿ ಪ್ರಕಟಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಜ್ಞಾನಂದ, "ನನ್ನ ಪೋಷಕರ ದೀರ್ಘಾವಧಿಯ ಕನಸು ನನಸಾಗುತ್ತಿದೆ" ಎಂದು ಆನಂದ್ ಮಹೀಂದ್ರಾರ ಟ್ವೀಟ್ಗೆ ನಿನ್ನೆ (ಮಂಗಳವಾರ) ಪ್ರತಿಕ್ರಿಯಿಸಿದ್ದರು. "ಕನಸುಗಳನ್ನು ಸಾಕಾರಗೊಳಿಸುವುದು ಕಾರು ತಯಾರಕರ ಅಂತಿಮ ಗುರಿ" ಎಂದು ಆನಂದ್ ಮಹೀಂದ್ರಾ ಉತ್ತರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಜ್ಯೂರಿಚ್ ಡೈಮಂಡ್ ಲೀಗ್: ಮತ್ತೊಂದು ಬಂಗಾರದ ಬೇಟೆಗೆ ಹೊರಟ ನೀರಜ್ ಚೋಪ್ರಾ