ಹೈದರಾಬಾದ್: 2000 ಮತ್ತು 2002 ರಲ್ಲಿ ಭಾರತಕ್ಕೆ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಚೆಸ್ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದರು. ಎರಡು ದಶಕಗಳ ನಂತರ ಫಿಡೆ ಚೆಸ್ ವಿಶ್ವಕಪ್ ಫೈನಲ್ಗೆ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಪ್ರವೇಶ ಪಡೆದಿದ್ದಾರೆ. ಫೈನಲ್ನಲ್ಲಿ ಇದೀಗ ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ ಆಡುತ್ತಿದ್ದಾರೆ. ಫೈನಲ್ ಪೈಪೋಟಿ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4:30ಕ್ಕೆ ಆರಂಭವಾಗಿದ್ದು, ಅಜರ್‌ಬೈಜಾನ್ ದೇಶದ ರಾಜಧಾನಿ ಬಾಕುವಿನಲ್ಲಿ ನಡೆಯುತ್ತಿದೆ.
ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸೆಮಿಫೈನಲ್ನಲ್ಲಿ ಟೈಬ್ರೇಕ್ ಪಂದ್ಯದಲ್ಲಿ 3.5 - 2.5 ಅಂಕಗಳಿಂದ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ್ದರು. ಈ ಮೂಲಕ 21 ವರ್ಷದ ಬಳಿಕ ಫಿಡೆ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.
ಚೆಸ್ ಚತುರ ಪ್ರಜ್ಞಾನಂದ ಸೆಮಿಫೈನಲ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಎದುರಿಸಿದ್ದರು. ಶನಿವಾರ ಮತ್ತು ಭಾನುವಾರ ನಡೆದ ಎರಡು ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರು. ಸೋಮವಾರ ನಡೆದ ಟೈ ಬ್ರೇಕರ್ನಲ್ಲಿ 25 ನಿಮಿಷದ ಎರಡು ಗೇಮ್ ಆಡಿಸಲಾಯಿತು. ಪಂದ್ಯ ಡ್ರಾ ಆದ ಕಾರಣ 10 ನಿಮಿಷದ ಮತ್ತೆರಡು ಗೇಮ್ ಆಡಿಸಲಾಯಿತು. 10 ನಿಮಿಷದ ಮೊದಲ ಗೇಮ್ನಲ್ಲಿ ಚಾಣಾಕ್ಷ ನಡೆಯಿಂದ ಮೂರನೇ ಶ್ರೇಯಾಂಕಿತ ಆಟಗಾರನನ್ನು ಮಣಿಸಿದರು. ಎರಡನೇ ಆಟದಲ್ಲಿ ಫ್ಯಾಬಿಯಾನೊ ಕರುವಾನಾಗೆ ಗೆಲ್ಲಲು ಅವಕಾಶ ಮಾಡಿಕೊಡದೇ ಡ್ರಾ ಸಾಧಿಸಿದರು. ಇದರಿಂದ ಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.