ಹೈದರಾಬಾದ್:2018ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಹಾಗೂ 2 ಕಂಚಿನ ಪದಕ ಹಾಗೂ 2016ರ ಜರ್ಮನ್ ಈಜು ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪ್ಯಾರಾ ಸ್ವಿಮ್ಮರ್ ಸುಯಾಶ್ ಜಾಧವ್ ಈ ಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ದುರಂತ ಅಪಘಾತದ ನಂತರ ಸ್ವಿಮ್ಮಿಂಗ್ನಲ್ಲಿ ಸಾಧನೆಯ ಶಿಖರವೇರದ ಸುದೀರ್ಘ ಪಯಣವನ್ನು ಹಂಚಿಕೊಂಡಿದ್ದಾರೆ.
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನ ಗೆದ್ದಿರುವುದಕ್ಕೆ ನಿಮ್ಮ ಭಾವನೆ ಹೇಗೆ ವ್ಯಕ್ತಪಡಿಸುತ್ತೀರಾ?
ಇದು ನನ್ನ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕಿರುವ ಮೊದಲ ಚಿನ್ನದ ಪದಕ. ಇದು ನನಗೆ ಮಾತ್ರವಲ್ಲದೆ ದೇಶಕ್ಕೂ ಸಿಕ್ಕಿರುವ ದೊಡ್ಡ ಹಿರಿಮೆ ಎಂದು ಭಾವಿಸುತ್ತೇನೆ. ಇದು ನಿಜವಾಗಿಯೂ ಅದ್ಭುತ ಅನುಭವ .ಭಾರತೀಯನಾಗಿ ಆ ಸಾಧನೆ ನನಗೆ ಬಹಳ ಹೆಮ್ಮೆಯನ್ನಿಸುತ್ತಿದೆ.
ನಿಮ್ಮ ಎರಡು ಕೈಗಳು ಹಾನಿಗೊಳಗಾದ ಅಪಘಾತದ ಬಗ್ಗೆ ತಿಳಿಸಿ?
2004ರಲ್ಲಿ ನಾನು 6ನೇ ತರಗತಿ ಓದುತ್ತಿದ್ದೆ. ನನ್ನ ಸೋದರ ಸಂಬಂಧಿಯ ವಿವಾಹ ಸಮಾರಂಭದಲ್ಲಿದ್ದೆವು. ನಾನು ಕಲ್ಯಾಣ ಮಂಟಪದ ಮಹಡಿಯ ಮೇಲೆ ಆಡುತ್ತಿದ್ದ ಸಂದರ್ಭದಲ್ಲಿ ವಿಧ್ಯುತ್ ತಂತಿಯನ್ನು ಸ್ಪರ್ಶಿಸಿದ್ದೆ. ಈ ವೇಳೆ ನನ್ನ ಎರಡು ಕೈಗಳು ಪಾರ್ಶ್ವವಾಯುವಿಗೆ ಒಳಗಾದವು. ಕೊನೆಗೆ ವೈದ್ಯರು ಮೊಣಕೈವರೆಗೆ ನನ್ನ ಕೈಗಳನ್ನು ಕತ್ತರಿಸಲು ನಿರ್ಧರಿಸಿದರು.
ಅಪಘಾತ ಸಂಭವಿಸಿದಾಗ ನಾನು ತುಂಬಾ ಚಿಕ್ಕವನಾಗಿದ್ದೆ. ನನಗೆ ಏನಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಲಿಲ್ಲ. ಆದರೆ ನನ್ನ ಕುಟುಂಬ ತುಂಬಾ ತೊಂದರೆ ಅನುಭವಿಸಿತು. ಸಹಜವಅಗಿಯೇ ನನ್ನ ಎರಡು ಕೈಗಳನ್ನು ಕಳೆದುಕೊಂಡಿರುವುದು ನನಗೂ ಬೇಸರವಾಗಿತ್ತು. ಅಪಘಾತದಿಂದ ಹೊರಬರಲು ನಾನು ಯಾವುದೇ ವಿಶೇಷ ಸಹಾಯವನ್ನು ತೆಗೆದುಕೊಳ್ಳಲಿಲ್ಲ. ನಾನು ನಿಧಾನವಾಗಿ ಸ್ವತಂತ್ರವಾಗಿ, ನನ್ನ ದೈನಂದಿನ ಕೆಲಸಗಳನ್ನು ನಿರ್ವಹಿಸಿಲು ಶುರುಮಾಡಿದೆ. ಇದೀಗ ಸಂಪೂರ್ಣವಾಗಿ ಸ್ವತಂತ್ರನಾಗಿದ್ದೇನೆ.
ರಾಷ್ಟ್ರೀಯ ಸ್ವಿಮ್ಮರ್ ಆಗಿರುವ ನಿಮ್ಮ ತಂದೆ, ನಿಮ್ಮ ಜರ್ನಿಯಲ್ಲಿ ಹೇಗೆ ಪಾತ್ರವಹಿಸಿದರು ತಿಳಿಸಿ?
ನನ್ನ ತಂದೆಯೇ ನನಗೆ ಮೊದಲ ಈಜು ಗುರುವಾಗಿದ್ದರು. ಅವರು ಈಜಿನ ಎಲ್ಲಾ ಮೂಲಭೂತ ವಿಷಯಗಳನ್ನು ಕಲಿಸಿಕೊಟ್ಟರು. 1978ರಲ್ಲಿ ಅವರು ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಆದರೆ ಕೆಲವು ಸಮಸ್ಯೆಗಳಿಂದ ಸ್ಪರ್ಧೆ ರದ್ದಾಯಿತು. ಹಾಗೆಯೇ ಅವರ ಕನಸುಗಳು ಕೂಡ ರದ್ದಾದವು. ಆದರೆ ಅವರ ಕನಸುಗಳನ್ನು ನಾನು ಇಡೇರಿಸಬೇಕೆಂದು ಬಯಸಿದ್ದರು. ನಾನು ಇಡೇರಿಸಿರುವುದಕ್ಕೆ ಸಂತೋಷವಾಗಿದೆ.
ನಿಮ್ಮ ದೈನಂದಿನ ಫಿಟ್‌ನೆಸ್ ಬಗ್ಗೆ ಹೇಳಿ? ಅದು ಸಾಮಾನ್ಯ ಸ್ವಿಮ್ಮರ್ಗಳಿಗಿಂತ ಹೇಗೆ ಭಿನ್ನ?
ನಾನು ರನ್ನಿಂಗ್ ಮಾಡುತ್ತೇನೆ. ಬಾಕ್ಸಿಂಗ್ ಗ್ಲೌಸ್ಗಳನ್ನು ತೊಟ್ಟು ಪುಷ್ಅಪ್ ಮಾಡುತ್ತೇನೆ. ಜಿಮ್ನಲ್ಲಿನ ಸಾಮಾನ್ಯ ವರ್ಕ್ಔಟ್ಗಳನ್ನು ಮಾಡುತ್ತೇನೆ. ಮೇಲ್ಭಾಗದ ದೇಹಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಕಡಿಮೆ ಮಾಡುತ್ತೇನೆ. ಆದರೆ ದೇಹದ ಕೆಳಭಾಗದ ಕಡೆಗೆ ಹೆಚ್ಚಿನ ಗಮನ ನೀಡುತ್ತೇನೆ.
ಈಜುವುದಕ್ಕೂ ಮುನ್ನ ಕೆಲವು ಫಿಟ್ನೆಸ್ಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತೇನೆ. ಬುಧವಾರ ಮತ್ತು ಶನಿವಾರಗಳನ್ನ ಫಿಟ್ನೆಸ್ಗಾಗಿಯೇ ನಿಯೋಜಿಸಿಕೊಂಡಿದ್ಧೇನೆ.