ಹೈದರಾಬಾದ್:ಬ್ಯಾಡ್ಮಿಂಟನ್ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿರುವ ಭಾರತ, ಚೊಚ್ಚಲ ಬಾರಿಗೆ 'ಥಾಮಸ್ ಕಪ್' ಗೆದ್ದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಈ ವಿಚಾರವಾಗಿ ಕೋಚ್ ವಿಮಲ್ ಕುಮಾರ್ ಮಾತನಾಡಿದ್ದು, ಇದೊಂದು ಸಾರ್ವಕಾಲಿಕ ಶ್ರೇಷ್ಠ ಸಾಧನೆ ಎಂದು ಬಣ್ಣಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ನಲ್ಲಿ ಥಾಮಸ್ ಕಪ್ ಗೆಲುವು ದೊಡ್ಡದು ಎಂದಿರುವ ಅವರು, ಕ್ರಿಕೆಟ್ನಲ್ಲಿ ವಿಶ್ವಕಪ್ ಹಾಗೂ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಅವರ ಕೊಡುಗೆಗೆ ಹೋಲಿಕೆ ಮಾಡಿದ್ದಾರೆ. 'ಈಟಿವಿ ಭಾರತ' ಜೊತೆ ದೂರವಾಣಿ ಮೂಲಕ ಮಾತನಾಡಿರುವ ವಿಮಲ್ ಕುಮಾರ್, ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಪಿ ವಿ ಸಿಂಧು ಹಾಗೂ ಪ್ರಕಾಶ್ ಪಡುಕೋಣೆ ಅವರ ಸಾಧನೆ ವಿಶೇಷವಾಗಿದ್ದವು. ಆದರೆ, ಒಂದು ತಂಡವಾಗಿ ಥಾಮಸ್ ಕಪ್ ಗೆಲುವು ದೊಡ್ಡ ಸಾಧನೆ ಎಂದು ನಾನು ಹೇಳುತ್ತೇನೆ ಎಂದರು.
ಇದನ್ನೂ ಓದಿ:ಬೆಂಗಳೂರಿನ ಆಗಮಿಸಿದ ಲಕ್ಷ್ಯ ಸೇನ್: ಥಾಮಸ್ ಕಪ್ ಅನುಭವ ವಿವರಿಸಿದ ಬ್ಯಾಡ್ಮಿಂಟನ್ ತಾರೆ
ಈ ಗೆಲುವು ಎಷ್ಟು ವಿಶೇಷ ಮತ್ತು ಬ್ಯಾಡ್ಮಿಂಟನ್ಗೆ ಹೇಗೆ ಉತ್ತೇಜನ ನೀಡಲಿದೆ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಗೆಲುವು ತುಂಬಾ ವಿಶೇಷ. ಬ್ಯಾಡ್ಮಿಂಟನ್ನಲ್ಲಿ ಥಾಮಸ್ ಕಪ್ ಗೆಲ್ಲುವುದು ಟೆನಿಸ್ನಲ್ಲಿ ಡೇವಿಡ್ ಕಪ್ ಹಾಗೂ ಕ್ರಿಕೆಟ್ನಲ್ಲಿ ವಿಶ್ವಕಪ್ ಗೆದ್ದಿದ್ದಕ್ಕೆ ಸಮಾನ. ಈ ಜಯ ಅನೇಕ ಯುವಕರನ್ನ ಕ್ರೀಡೆಯತ್ತ ಕರೆದೊಯ್ಯುತ್ತದೆ ಎಂದರು.
ಲಕ್ಷ್ಯಸೇನ್ ಅದ್ಭುತ ಫಾರ್ಮ್ನಲ್ಲಿದ್ದು, ಪಂದ್ಯಾವಳಿಯಲ್ಲಿ ಅವರ ಪ್ರದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯ?: ಇಂತಹ ಚಾಂಪಿಯನ್ಶಿಪ್ಗಳಲ್ಲಿ ಹಿರಿಯ ಆಟಗಾರರು ಹೆಚ್ಚು ಪ್ರಾಮುಖ್ಯತೆ ವಹಿಸುತ್ತಾರೆ. ಲಕ್ಷ್ಯಸೇನ್ಗೆ ಹೋಲಿಕೆ ಮಾಡಿದಾಗ, ಶ್ರೀಕಾಂತ್, ಪ್ರಣಯ್ ಅನುಭವಿ ಆಟಗಾರರು. ಆದರೆ, ಲಕ್ಷ್ಯಸೇನ್ ಪ್ರದರ್ಶನ ನಿಜಕ್ಕೂ ಎಲ್ಲರಿಗೂ ಪ್ರೇರಣೆ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ಬಳಿಕ ಕ್ರಿಕೆಟ್ ಜನಪ್ರಿಯವಾಯಿತು. ಬ್ಯಾಡ್ಮಿಂಟನ್ ಕೂಡ ಇದೀಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಥಾಮಸ್ ಕಪ್ನಲ್ಲಿ ಕಿಡಂಬಿ ಶ್ರೀಕಾಂತ್ ಅವರ ಪರಿಶ್ರಮ ತುಂಬಾ ಇದೆ ಎಂದು ಹೇಳಿದರು.