ಹೈದರಾಬಾದ್: ಭಾರತದ ಟಾಪ್ ಫ್ರೀಸ್ಟೈಲ್ ಕುಸ್ತಿಪಟು ಬಜರಂಗ್ ಪೂನಿಯಾ 2020(21)ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು 2008ರಲ್ಲಿ ಅಭಿನವ್ ಬಿಂದ್ರಾ ಮಾಡಿದ ಸಾಧನೆಯನ್ನು ಪುನಾರಾವರ್ತಿಸುವೆ ಎಂದು ಈ ಟಿವಿ ಭಾರತ ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ಎರಡನೇ ಚಿನ್ನದ ಪದಕ ಗೆದ್ದು ಕೊಡುವ ಬಹುದೊಡ್ಡ ಭರವಸೆ ಮೂಡಿಸಿದ್ದಾರೆ.
ಕೋಟ್ಯಂತರ ಜನ ಸಂಖ್ಯೆ ಇರುವ ಭಾರತ ದೇಶ ಒಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದಿರುವುದು ಕೇವಲ ಒಂದೇ ಒಂದು ಚಿನ್ನದ ಪದಕ ಎನ್ನುವುದು ನಿಜಕ್ಕೂ ವಿಷಾದವೇ ಸರಿ. ಅದು 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್ನಲ್ಲಿ ಗೆದ್ದಿದ್ದರು. ಇದು ವೈಯಕ್ತಿಕ ವಿಭಾಗದಲ್ಲಿ ಬಂದಿದ್ದ ಮೊದಲ ಚಿನ್ನದ ಪದಕವಾಗಿದೆ. ವಿಶ್ವದ ಎರಡನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾದ ಭಾರತ ತಂಡ ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್ನಲ್ಲಿ ಎರಡನೇ ಚಿನ್ನಕ್ಕಾಗಿ ಕಾತುರದಿಂದ ಕಾಯುತ್ತಿದೆ.
ಇಡಿ ದೇಶದ ಜನರ ನಿರೀಕ್ಷೆಯನ್ನು ಈಡೇರಿಸುವುದು ಅನೇಕ ಜನರಿಗೆ ಹೊರೆಯಾಗಿರಬಹುದು,. ಆದರೆ ಬಜರಂಗ್ ಪೂನಿಯಾಗೆ ಇದೊಂದು ಹೆಮ್ಮೆಯ ವಿಷಯವಾಗಿದೆ.
"ದೇಶವಾಸಿಗಳು ಒಲಿಂಪಿಕ್ ವೈಭವಕ್ಕಾಗಿ ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ನಾನು ಕೃತಜ್ಞ ಹಾಗೂ ತೃಪ್ತಿ ಹೊಂದಿದ್ದೇನೆ. ಅವರು ನನ್ನನು ನಂಬುವುದರಿಂದಲೇ ನನ್ನ ಮೇಲೆ ಪದಕದ ನಿರೀಕ್ಷೆಗೆ ಕಾರಣವಾಗಿದೆ. 2008ರಲ್ಲಿ ಬೇಸಿಗೆ ಕೂಟದಲ್ಲಿ ಅಭಿನವ್ ಬಿಂದ್ರಾ ಮಾಡಿರುವ ಸಾಧನೆಯನ್ನು ನಾನು ಪುನಾರಾವರ್ತಿಸುತ್ತೇನೆ ಎಂದು ಪೂನಿಯಾ ಹೇಳಿದ್ದಾರೆ.