ಪಟಿಯಾಲ: ಶುಕ್ರವಾರದಿಂದ ಆರಂಭವಾಗಲಿರುವ ಅಂತಾರಾಜ್ಯ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳೆಯರ 4x100 ರಿಲೇ ಮತ್ತು ಪುರುಷರ 4x400 ರಿಲೇಯಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವುದಕ್ಕೆ ಕೊನೆಯ ಅವಕಾಶವಾಗಿದೆ. ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಜೂನ್ 29 ಕೊನೆಯ ದಿನಾಂಕವಾಗಿದೆ. ಹಾಗಾಗಿ ಆಥ್ಲೀಟ್ಗಳಿಗೆ ಈ ಟೂರ್ನಿಯೇ ಕೊನೆಯದಾಗಿದೆ.
ಮಹಿಳೆಯರ 4x100 ಮೀಟರ್ ರಿಲೇಯಲ್ಲಿ ದ್ಯುತಿ ಚಾಂದ್, ಹಿಮಾ ದಾಸ್, ಅರ್ಚನಾ ಸುಸೀಂದ್ರನ್ ಮತ್ತು ಎಸ್ ಧನಲಕ್ಷ್ಮಿ ಒಳಗೊಂಡ ತಂಡ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು 43.05 ಸೆಕೆಂಡ್ಗಳಲ್ಲಿ ರಿಲೇ ಪೂರ್ಣಗೊಳಿಸಬೇಕಿದೆ.
ಜುಲೈ 13ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ನಲ್ಲಿ 4x100 ರಿಲೇಯಲ್ಲಿ ಕೇವಲ ಟಾಪ್ 16 ತಂಡಗಳಿಗೆ ಮಾತ್ರ ಅವಕಾಶವಿದೆ. ಪ್ರಸ್ತುತ ಭಾರತ 20ನೇ ಶ್ರೇಯಾಂಕದಲ್ಲಿದೆ. ಸೋಮವಾರ ಕೊನೆಗೊಂಡ ಇಂಡಿಯನ್ ಗ್ರ್ಯಾಂಡ್ಫ್ರಿಕ್ಸ್ 4ನಲ್ಲಿ ಭಾರತ ತಂಡ 43.37 ಸೆಕೆಂಡ್ಸ್ಗಳಲ್ಲಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿತ್ತು. ಆದರೆ, ಈ ದಾಖಲೆ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಸಾಕಾಗಿಲ್ಲ.
ಪುರುಷರ 4x400 ರಿಲೇ ವಿಭಾಗದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಬೇಕಾದರೆ, 3 ನಿಮಿಷ 2.50 ಸೆಕೆಂಡ್ಗಳಲ್ಲಿ ತಲುಪಬೇಕಿದೆ. ಆದರೆ, ಮೊಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಅರೋಕಿಯಾ ರಾಜೀವ್, ಮತ್ತು ನೋವಾ ನಿರ್ಮಲ್ ತೋಮ್ ಮೊನ್ನೆ ನಡೆದ ಇಂಡಿಯನ್ ಗ್ರ್ಯಾಂಡ್ಫ್ರಿಕ್ಸ್ 4ನಲ್ಲಿ 3 ನಿಮಿಷ 2.61 ಸೆಕೆಂಡ್ಗಳಲ್ಲಿ ತಲುಪಿದ್ದರು. ಇದೀಗ ಕೊನೆಯ ಅವಕಾಶವಾಗಿದ್ದು, ತಮ್ಮ ದಾಖಲೆಯನ್ನು ಸುಧಾರಿಸಿಕೊಳ್ಳಬೇಕಿದೆ.
ಇದನ್ನು ಓದಿ:ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ಬಹುಮಾನ... ಈ ರಾಜ್ಯದಿಂದ ಘೋಷಣೆ