ಕರ್ನಾಟಕ

karnataka

Dutee Chand: ಕ್ಯಾನ್ಸರ್​ಗಾಗಿ ಔಷಧ ಸೇವಿಸಿದೆ, ನಿಷೇಧಿತ ಡ್ರಗ್ ಎಂದು ಗೊತ್ತಿರಲಿಲ್ಲ... ನಾಲ್ಕು ವರ್ಷ ನಿಷೇಧದ ಬಗ್ಗೆ ದ್ಯುತಿ ಚಂದ್

By

Published : Aug 19, 2023, 5:22 PM IST

Dutee Chand receives four year ban: ಲೆವೆಲ್ 1 ಕ್ಯಾನ್ಸರ್​ಗಾಗಿ ಔಷಧ ಸೇವಿಸಿರುವುದು ಡೋಪ್ ಪರೀಕ್ಷೆಯಲ್ಲಿ ವಿಫಲವಾಗಲು ಕಾರಣ ಎಂದು ದ್ಯುತಿ ಚಂದ್ ಹೇಳಿಕೊಂಡಿದ್ದಾರೆ

Dutee Chand
ದ್ಯುತಿ ಚಂದ್

ಭುವನೇಶ್ವರ (ಒಡಿಶಾ): ಏಷ್ಯನ್ ಗೇಮ್ಸ್​​ನಲ್ಲಿ ಎರಡು ಬೆಳ್ಳಿ ಪದಕ ವಿಜೇತೆ ದ್ಯುತಿ ಚಂದ್ ಡೋಪ್ ಪರೀಕ್ಷೆಯಲ್ಲಿ ವಿಫಲವಾಗಿ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ. 'ದೇಶದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಪ್ರತಿನಿಧಿಸಲು ಸಹಾಯ ಮಾಡಬೇಕು ಎಂದು ಒಡಿಶಾ ಮತ್ತು ಕೇಂದ್ರ ಸರ್ಕಾರವನ್ನು ದ್ಯುತಿ ಚಂದ್ ಒತ್ತಾಯಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್​ 5 ಮತ್ತು 26 ರಂದು ನಡೆಸಿದ ಡೋಪಿಂಗ್​ ಪರೀಕ್ಷೆಯಲ್ಲಿ ವಾಡಾ ನಿಷೇಧಿಸಿದ ಕೆಲ ಪದಾರ್ಥಗಳು ಸೇವಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ದ್ಯುತಿ ಚಂದ್​ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ.

"ನಾನು ಸವಾಲು ಹಾಕಿದ ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ಪಡೆದಿರುವ ಪ್ರಕರಣದಲ್ಲಿ ನಾನು ಸೋತಿದ್ದೇನೆ ಎಂಬ ಸುದ್ದಿ ನಿನ್ನೆ ಬೆಳಿಗ್ಗೆ ನನಗೆ ಬಂತು. ಇದರ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ. ಈ ಹಿಂದೆ ಹಲವಾರು ಡೋಪಿಂಗ್ ಪರೀಕ್ಷೆಗಳನ್ನು ಮಾಡಿದ್ದೇನೆ. ಅವುಗಳಲ್ಲಿ ಈ ರೀತಿ ಸಂಭವಿಸಿರಲಿಲ್ಲ. ನಾನು ವಿವಿಧ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಹಾಯ ಮಾಡುವಂತೆ ರಾಜ್ಯ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆ (ನಾಡಾ)ಯನ್ನು ವಿನಂತಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ" ಎಂದು ದ್ಯುತಿ ಚಂದ್ ತಿಳಿಸಿದ್ದಾರೆ.

ನಾಡಾದ ಪ್ರಕಾರ ದ್ಯುತಿ ಚಂದ್ ಅವರ ನಿಷೇಧವು ಈ ವರ್ಷದ ಜನವರಿ 3 ರಿಂದ ಜಾರಿಗೆ ಬರಲಿದೆ ಮತ್ತು ಅವರ ಎಲ್ಲಾ ಫಲಿತಾಂಶಗಳು ಅನರ್ಹಗೊಂಡಿವೆ. ಅವರು ಜಯಿಸಿದ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಲೆವೆಲ್ 1 ಕ್ಯಾನ್ಸರ್​ಗಾಗಿ ಔಷಧ ತೆಗೆದುಕೊಂಡಿರುವುದಾಗಿ ಚಂದ್​ ಹೇಳಿದ್ದಾರೆ. "ನನ್ನ ಜೀವನದಲ್ಲಿ ಏನಾಯಿತು ಎಂದು ಯೋಚಿಸುತ್ತಾ ನಾನು ತುಂಬಾ ಹೆದರುತ್ತಿದ್ದೆ. ನಾನು ಎಮ್​ಆರ್​ಐ ಸ್ಕ್ಯಾನ್ ಮಾಡಿದ್ದೇನೆ ಅದರಲ್ಲಿ ಲೆವೆಲ್ 1 ಕ್ಯಾನ್ಸರ್ ಪ್ರಾರಂಭವಾಗಿದೆ ಎಂದು ವೈದ್ಯರು ನನಗೆ ಹೇಳಿದರು. ನೋವು ನಿವಾರಣೆಗಾಗಿ ನಾನು ಆ ಔಷಧಿಯನ್ನು ತೆಗೆದುಕೊಂಡಿದ್ದೆ. ಅದು ಡೋಪಿಂಗ್ ಆಗಿದೆ ಎಂದು ನನಗೆ ತಿಳಿದಿರಲಿಲ್ಲ," ಎಂದು ದ್ಯುತಿ ಚಂದ್​ ಸ್ಪಷ್ಟಪಡಿಸಿದರು.

ನಾಡಾ ತನ್ನ ಮೇಲೆ ವಿಧಿಸಿರುವ ನಾಲ್ಕು ವರ್ಷಗಳ ನಿಷೇಧವನ್ನು ಪ್ರಶ್ನಿಸುವುದಾಗಿ ಚಾಂದ್ ಹೇಳಿದ್ದಾರೆ. "ನನ್ನ ವಕೀಲರು ಈ ಪ್ರಕರಣದಿಂದ ನನ್ನನ್ನು ಮುಕ್ತ ಮಾಡಲು ಸಾಕಷ್ಟು ಪ್ರಯತ್ನಿಸಿದರು. ಇದುವರೆಗೂ ಭಾರತದಲ್ಲಿ ನಾಲ್ಕು ವರ್ಷಗಳ ಕಾಲ ಯಾವುದೇ ಅಥ್ಲೀಟ್‌ಗೆ ನಿಷೇಧ ಹೇರಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ನನಗೆ 21 ದಿನಗಳು ಸಿಕ್ಕಿವೆ. ನಾವು ಮತ್ತೆ ಪ್ರಕರಣವನ್ನು ದಾಖಲಿಸುತ್ತೇವೆ" ಎಂದು ಹೇಳಿದರು.

"ನಾನು ಕಷ್ಟಪಟ್ಟು ದುಡಿಯುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೇನೆ, ನಾನು ದೇಶಕ್ಕಾಗಿ ಆಟವನ್ನು ಆಡಿದ್ದೇನೆ. ನನಗೆ ಸಹಾಯ ಮಾಡಲು ಮತ್ತು ಅವಕಾಶ ನೀಡುವಂತೆ ನಾನು ಕ್ರೀಡಾ ಪ್ರಾಧಿಕಾರ, ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ. 2024 ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನಾನು ಕಠಿಣ ಪ್ರಯತ್ನ ಮಾಡುತ್ತೇನೆ" ಎಂದು ದ್ಯುತಿ ತಿಳಿಸಿದರು.

ದ್ಯುತಿ ಚಂದ್ ಏಷ್ಯನ್ ಗೇಮ್ಸ್ ಪದಕ ವಿಜೇತೆ, ಅವರು 2018 ರ ಆವೃತ್ತಿಯ ಈವೆಂಟ್‌ನಲ್ಲಿ 100 ಮೀ ಮತ್ತು 200 ಮೀ ಮಹಿಳೆಯರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದರು. 2013, 2017 ಮತ್ತು 2019ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2019 ರಲ್ಲಿ ಅವರು ಯೂನಿವರ್ಸಿಯಾಡ್‌ನ 100 ಮೀ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಓಟಗಾರ್ತಿ ಎಂಬ ಖ್ಯಾತಿ ಗಳಿಸಿದ್ದರು.

ಇದನ್ನೂ ಓದಿ:ಉದ್ದೀಪನ ಮದ್ದು ಸೇವನೆ: ಅಥ್ಲೀಟ್ ದ್ಯುತಿ ಚಂದ್​ಗೆ 4 ವರ್ಷ ನಿಷೇಧ

ABOUT THE AUTHOR

...view details