ಯುಜೀನ್, ಅಮೆರಿಕ:ಈ ಬಾರಿಯ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಆದರೆ, ಈಗ ಅವರ ಗುರಿ ಡೈಮಂಡ್ ಲೀಗ್ ಪ್ರಶಸ್ತಿ ಮೇಲಿದೆ. ಈ ಪ್ರತಿಷ್ಠಿತ ಟೂರ್ನಿ ಗೆಲ್ಲಲು ನೀರಜ್ ಚೋಪ್ರಾ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಡೈಮಂಡ್ ಲೀಗ್ ಫೈನಲ್ಸ್ ಇಂದು ನಡೆಯಲಿದ್ದು, ಇದರಲ್ಲಿ ಅವರು ಸ್ಪರ್ಧಿಸಲಿದ್ದಾರೆ.
Diamond League 2023 Final:25 ವರ್ಷದ ನೀರಜ್ ಕಳೆದ ವರ್ಷ ಡೈಮಂಡ್ ಲೀಗ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. ಈಗ ಈ ಸೀಸನ್ನಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೂರನೇ ಅಥ್ಲೀಟ್ ಆಗುವ ಸಂಕಲ್ಪ ತೊಟ್ಟಿದ್ದಾರೆ. ಅವರು ಈ ವರ್ಷದ ದೋಹಾ ಮತ್ತು ಲೌಸನ್ನೆ ಡೈಮಂಡ್ ಲೀಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇನ್ನು ಜ್ಯೂರಿಚ್‌ನಲ್ಲಿ (85.71 ಮೀಟರ್) ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು.
ಸ್ನಾಯು ಗಾಯದಿಂದ ಸುಮಾರು ಒಂದು ತಿಂಗಳ ಕಾಲ ಅವರು ಆಟದಿಂದ ಹೊರಗುಳಿದಿದ್ದರು. ಈಗ ಈ ಅಂತಿಮ ಕದನದಲ್ಲಿ ನೀರಜ್ ಚೋಪ್ರಾ ತನ್ನ 90 ಮೀಟರ್ ಗುರಿಯನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ. ಪ್ರಸ್ತುತ ಈ ಸೀಸನ್ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 88.77 ಮೀಟರ್ ಇದೆ. ಈ ಬಾರಿ ಪ್ರಶಸ್ತಿ ಗೆಲ್ಲುವುದರೊಂದಿಗೆ 90 ಮೀಟರ್ ಗುರಿ ಮುಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.