ನವದೆಹಲಿ: ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ 5 ಕ್ರೀಡಾಪಟುಗಳನ್ನ ಆಯ್ಕೆ ಮಾಡಿರುವುದಕ್ಕೆ ಹಾಗೂ ಒಟ್ಟಾರೆ 74 ಮಂದಿಯನ್ನು ವಿವಿಧ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.
ಈ ವರ್ಷ ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ರೋಹಿತ್ ಶರ್ಮಾ ಸಹಿತ 5 ಮಂದಿಯನ್ನು ಖೇಲ್ ರತ್ನ ಪ್ರಶಸ್ತಿಗೆ, 27 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ, ದ್ರೋಣಾಚಾರ್ಯ ಪ್ರಶಸ್ತಿಯನ್ನು 13 ಕೋಚ್ಗಳಿಗೆ ಹಾಗೂ ಧ್ಯಾನ್ಚಂದ್ ಪ್ರಶಸ್ತಿಗೆ 15 ಮಂದಿ ಕೋಚ್ಗಳನ್ನು ನಾಮನಿರ್ದೇಶನ ಮಾಡಿತ್ತು. ಈ ಎಲ್ಲರಿಗೂ ಕೇಂದ್ರ ಕ್ರೀಡಾ ಇಲಾಖೆ ಪ್ರಶಸ್ತಿಯನ್ನು ಅನುಮೋದನೆ ಮಾಡಿದ್ದು, ಇಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚು ಕ್ರೀಡಾ ಪ್ರಶಸ್ತಿಗಳನ್ನು ನೀಡುತ್ತಿರುವುದನ್ನು ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.