ಜರ್ಮನಿ:ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ಜೂನಿಯರ್ ವಿಶ್ವಕಪ್‌ನಲ್ಲಿ ಧನುಷ್ ಶ್ರೀಕಾಂತ್ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸ್ಪರ್ಧೆಯ ಮೂರನೇ ದಿನ ಭಾರತ 6 ಪದಕಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿತು. ಶೂಟಿಂಗ್‌ನಲ್ಲಿ ಭಾರತಕ್ಕೆ ದಕ್ಕಿದ ಮೂರನೇ ಚಿನ್ನದ ಪದಕ ಇದಾಗಿದೆ.
ಶೂಟಿಂಗ್ ಫೈನಲ್‌ನಲ್ಲಿ ಧನುಷ್ 24 ಶಾಟ್‌ಗಳಲ್ಲಿ 249.4 ಅಂಕ ಗಳಿಸಿದರು. ಬೆಳ್ಳಿ ಪದಕ ವಿಜೇತ ಸ್ವೀಡನ್‌ನ ಪಾಂಟಸ್ ಕೊಲ್ಲಿನ್ ಅವರನ್ನು 1.3 ಅಂಕಗಳ ತೀವ್ರ ಪೈಪೋಟಿಯಲ್ಲಿ ಮಣಿಸಿ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ. ಫ್ರಾನ್ಸ್‌ನ ರೊಮೈನ್ ಔಫ್ರೆರೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಸ್ಕೀಟ್ ಮಿಶ್ರ ತಂಡ ಸ್ಪರ್ಧೆಯಲ್ಲೂ ಭಾರತ ಕಂಚಿನ ಪದಕ ಸಾಧನೆ ತೋರಿತು. ಹರ್ಮೆಹರ್ ಲಾಲಿ ಮತ್ತು ಸಂಜನಾ ಸೂದ್ ಕಂಚು ಜಯಿಸಿದರು. ಸ್ವೀಡಿಷ್ ಎದುರಾಳಿಗಳಾದ ಡೇವಿಡ್ ಜಾನ್ಸನ್ ಮತ್ತು ಫೆಲಿಸಿಯಾ ರೋಸ್ ಅವರನ್ನು ಸೋಲಿಸಿ ಲಾಲಿ ಮತ್ತು ಸಂಜನಾ ಜೋಡಿ ಮೂರನೇ ಸ್ಥಾನ ಪಡೆಯುವಲ್ಲಿ ಯಶ ಕಂಡರು.
ಭಾರತ ಈಗ 3 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದುವರೆಗೆ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳನ್ನು ಹೊಂದಿರುವ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಇಂದು ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್ ನಡೆಯಲಿದ್ದು ಅದರಲ್ಲೂ ಭಾರತದ ಸ್ಪರ್ಧಿ ಪದಕ ಸಾಧನೆ ಮಾಡುವ ನಿರೀಕ್ಷೆ ಇದೆ.