ನವದೆಹಲಿ : ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ವಿಶ್ವ ಚೆಸ್ ಶ್ರೇಯಾಂಕದಲ್ಲಿ ಹಿಂದಿಕ್ಕುವ ಮೂಲಕ 17 ವರ್ಷದ ಡಿ. ಗುಕೇಶ್ ಅವರು ಗಮನ ಸೆಳೆದಿದ್ದಾರೆ. ಈ ಮೂಲಕ ಚೆಸ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಗುಕೇಶ್ ಅವರ ಸಾಧನೆಗೆ ಮೆಚ್ಚಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫಿಡೆ (FIDE) ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಮಿಸ್ಟ್ರಾಡಿನ್ ಇಸ್ಕಂದರೋವ್ ಅವರನ್ನು ಸೋಲಿಸಿದ ಗುಕೇಶ್, ಕ್ಲಾಸಿಕ್ ಓಪನ್ ವಿಭಾಗದಲ್ಲಿ ವಿಶ್ವದ 9ನೇ ಶ್ರೇಯಾಂಕ ಪಡೆದುಕೊಂಡರು. ಲೈವ್ ರೇಟಿಂಗ್‌ನಲ್ಲಿ ಗುಕೇಶ್ 2755.9 ಅಂಕ ಗಳಿಸಿದರು. ಇದರಿಂದ 2754.0 ಅಂಕವನ್ನು ಹೊಂದಿರುವ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ 10ನೇ ಶ್ರೇಯಾಂಕ ಇಳಿದಿದ್ದಾರೆ. ಭಾರತದ ಗುಕೇಶ್ ತಮ್ಮ ಗುರು ಆನಂದ್ ಅವರನ್ನೇ ಶ್ರೇಯಾಂಕದಲ್ಲಿ ಮೀರಿಸಿ ದಾಖಲೆ ಮಾಡಿದ್ದಾರೆ. 1986ರ ನಂತರ ಆನಂದ್ ಅವರು ಎರಡನೇ ಬಾರಿ ನೇರ ವಿಶ್ವ ಶ್ರೇಯಾಂಕನಲ್ಲಿ ಕುಸಿತ ಕಂಡಿದ್ದಾರೆ.
ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಐಸಿಎಫ್) ಈ ಬಗ್ಗೆ ಟ್ವೀಟ್ ಮಾಡಿ ಗುಕೇಶ್ ಅವರಿಗೆ ಶುಭಾಶಯ ತಿಳಿಸಿದೆ. "ಗುಕೇಶ್ ಡಿ ಇಂದು ಮತ್ತೊಮ್ಮೆ ಗೆದ್ದಿದ್ದಾರೆ ಮತ್ತು ಲೈವ್ ರೇಟಿಂಗ್‌ನಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಸೆಪ್ಟೆಂಬರ್ 1ರಂದು ಮುಂದಿನ ಅಧಿಕೃತ FIDE ರೇಟಿಂಗ್ ಪಟ್ಟಿ ಬಿಡುಗಡೆ ಆಗಲಿದ್ದು, ಯುವ ಆಟಗಾರ ಇನ್ನಷ್ಟೂ ಏರಿಕೆ ಕಾಣಲಿದ್ದಾರೆ. ವಿಶ್ವದ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಆಟಗಾರರಾಗಲಿದ್ದಾರೆ" ಎಂದಿದೆ.