ಲಂಡನ್: ವಿಂಬಲ್ಡನ್ ಮಹಿಳಾ ಸಿಂಗಲ್ಸ್ನಲ್ಲಿ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಇತಿಹಾಸ ಸೃಷ್ಟಿಸಿದ್ದಾರೆ. ಶನಿವಾರ ನಡೆದ 2023ರ ವಿಂಬಲ್ಡನ್ ಫೈನಲ್‌ನಲ್ಲಿ ಟ್ಯುನಿಷಿಯಾದ ನಂ.6 ಶ್ರೇಯಾಂಕದ ಓನ್ಸ್ ಜಬೇರ್ ಅವರನ್ನು ಮಣಿಸಿ ವಿಂಬಲ್ಡನ್ ಕಿರೀಟವನ್ನು ವೊಂಡ್ರೊಸೊವಾ ಮುಡಿಗೇರಿಸಿಕೊಂಡಿದ್ದಾರೆ. ಇದು ಮಾರ್ಕೆಟಾ ವೊಂಡ್ರೊಸೊವಾ ಅವರಿಗೆ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಅಲ್ಲದೇ, ವಿಂಬಲ್ಡನ್ ಗೆದ್ದ ಕಡಿಮೆ ಶ್ರೇಯಾಂಕದ ಮತ್ತು ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಗೆ ವೊಂಡ್ರೊಸೊವಾ ಪಾತ್ರರಾಗಿದ್ದಾರೆ.
2022ರ ರನ್ನರ್ ಅಪ್ ಆಗಿರುವ ಓನ್ಸ್ ಜಬೇರ್ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ಮಾರ್ಕೆಟಾ ವೊಂಡ್ರೊಸೊವಾ ಈ ಅದ್ಭುತ ಸಾಧನೆ ಮಾಡಿದ್ದಾರೆ. ಜೆಕ್ ಗಣರಾಜ್ಯದ 24 ವರ್ಷದ ಈ ಎಡಗೈ ಆಟಗಾರ್ತಿ 42ನೇ ಶ್ರೇಯಾಂಕವನ್ನು ಹೊಂದಿದ್ದಾರೆ. 60 ವರ್ಷಗಳಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಫೈನಲ್ ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿಯಾಗಿದ್ದಾರೆ.