ಕರ್ನಾಟಕ

karnataka

CWG 2022: 300 ಕೆಜಿ ವೇಟ್‌ಲಿಫ್ಟ್​ ಮಾಡಿದ 19 ವರ್ಷದ ಯುವ ಯೋಧ ಜೆರೆಮಿ

By

Published : Jul 31, 2022, 8:19 PM IST

ಮಿಜೋರಾಂನ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಭಾರತೀಯ ಯೋಧನಾಗಿದ್ದಾರೆ. ಅಲ್ಲದೇ, ಮಿಜೋರಾಂನ ಮೊದಲ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಎಂಬ ಖ್ಯಾತಿಗೂ ಜೆರೆಮಿ ಪಾತ್ರರಾಗಿದ್ದಾರೆ.

CWG 2022: Jeremy Lalrinnunga gets India second gold with Games record
ಕಾಮನ್‌ವೆಲ್ತ್ ಗೇಮ್ಸ್‌: 300 ಕೆಜಿ ವೇಟ್‌ಲಿಫ್ಟ್​ ಮಾಡಿದ 19 ವರ್ಷದ ಯುವ ಯೋಧ ಜೆರೆಮಿ

ಬರ್ಮಿಂಗ್‌ಹ್ಯಾಮ್(ಯುಕೆ):ಬರ್ಮಿಂಗ್‌ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಅದ್ಬುತ ಪ್ರದರ್ಶನ ತೋರುತ್ತಿದ್ದಾರೆ. ಇಂದು ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನ ಪದಕ ಗೆಲ್ಲುವುದೊಂದಿಗೆ ಎರಡು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶೇಷವೆಂದರೆ 19 ವರ್ಷದ ಈ ಯುವ ಪಟು, ಭಾರತೀಯ ಸೇನೆಯ ಯೋಧ ಅನ್ನೋದು.

ಮಿಜೋರಾಂನ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ 67 ಕೆಜಿ ವಿಭಾಗದಲ್ಲಿ ಎರಡು ಹೊಸ ದಾಖಲೆಗಳನ್ನು ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಕ್ಲೀನ್ ಮತ್ತು ಜರ್ಕ್​ ವಿಭಾಗದ ಮೊದಲ ಸುತ್ತಿನಲ್ಲಿ ಜೆರೆಮಿ 154 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಉತ್ತಮವಾಗಿ ಪ್ರಾರಂಭಿಸಿದರು. ಈ ವೇಳೆ ಅವರು ಗಾಯಗೊಂಡರು. ಆದರೂ, ಎರಡನೇ ಪ್ರಯತ್ನದಲ್ಲಿ 160 ಕೆಜಿ ಎತ್ತಿ ಗಮನ ಸೆಳೆದರು. ಸ್ನ್ಯಾಚ್‌ ವಿಭಾಗದಲ್ಲಿ ದಾಖಲೆಯ 140 ಕೆಜಿ ವೇಟ್‌ಲಿಫ್ಟ್​ ಮಾಡಿದರು. ಇದರೊಂದಿಗೆ ಒಟ್ಟು 300 ಕೆಜಿಯ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಜೆರೆಮಿ ತಮ್ಮ ಏಳನೇ ವಯಸ್ಸಿನಲ್ಲೇ ವೇಟ್‌ಲಿಫ್ಟಿಂಗ್ ಪ್ರಾರಂಭಿಸಿದರು. 2018ರ ಯೂತ್ ಒಲಿಂಪಿಕ್ಸ್‌ನಲ್ಲಿ 62 ಕೆಜಿ ವಿಭಾಗದಲ್ಲಿ ಪದಕ ಗೆದ್ದಿದ್ದರು. ಕಳೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ರಾಷ್ಟ್ರಪತಿ-ಸೇನೆಯಿಂದಲೂ ಅಭಿನಂದನೆ: ಎರಡನೇ ಚಿನ್ನ ಪದಕ ತಂದು ಕೊಟ್ಟಿರುವ ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು. ಆಟದ ಸಮಯದಲ್ಲಿ ಗಾಯದ ಹೊರತಾಗಿಯೂ ನಿಮ್ಮ ಆತ್ಮ ವಿಶ್ವಾಸವು ಇತಿಹಾಸವನ್ನು ರಚಿಸಲು ಮತ್ತು ಲಕ್ಷಾಂತರ ಜನರನ್ನು ಪ್ರೇರೇಪಿಸಲು ಅನುವು ಮಾಡಿಕೊಟ್ಟಿತು. ನಿಮ್ಮ ಸಾಧನೆ ಭಾರತೀಯರಲ್ಲಿ ಹೆಮ್ಮೆ ಉಂಟು ಮಾಡಿದೆ. ಇಂತಹ ವೈಭವದ ಕ್ಷಣಗಳು ನಿಮಗೆ ಇನ್ನಷ್ಟು ಸಿಗಲಿ ಎಂದು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ಮುರ್ಮು ಟ್ವೀಟ್​ ಮಾಡಿದ್ದಾರೆ.

ಇತ್ತ, ಭಾರತೀಯ ಸೇನೆಯು ' 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ 300 ಕೆಜಿ ವೇಟ್‌ಲಿಫ್ಟ್​ ಮಾಡಿದ ನಾಯಿಬ್ ಸುಬೇದಾರ್ ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದೆ. ಮಿಜೋರಾಂ ಮುಖ್ಯಮಂತ್ರಿ ಹಾಗೂ ಜೋರಮ್​ಥಂಗಾ ಹಾಗೂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟ್ ಕೂಡ ಜೆರೆಮಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಿಜೋರಾಂನ ಮೊದಲ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಜೆರೆಮಿ ಅವರು, ಮಿಜೋರಾಂ ರಾಜ್ಯವನ್ನು ಭಾರತೀಯ ವೇಟ್‌ಲಿಫ್ಟಿಂಗ್ ನಕ್ಷೆಯಲ್ಲಿ ಸೇರಿಸಿದ್ದಾರೆ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಜೆರೆಮಿ ಎಂದು ಸಿಎಂ ಟ್ವೀಟ್​ ಮಾಡಿದ್ದಾರೆ.

ನನಗೆ ಹೆಮ್ಮೆಯ ಸಂಗತಿ: ಭಾರತಕ್ಕೆ ಎರಡನೇ ಚಿನ್ನ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಚಿನ್ನದ ಹುಡುಗ ಜೆರೆಮಿ ಹೇಳಿದ್ದಾರೆ. ಅಲ್ಲದೇ, ಮುಂದೆ ಇನ್ನೂ ಉತ್ತಮ ಪ್ರದರ್ಶನ ನೀಡುವ ಭರವಸೆ ಹೆಚ್ಚಿದೆ ಎಂದು ತಿಳಿಸಿದ್ದಾರೆ. ನಾನು ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದೇನೆ. ಸ್ಪರ್ಧೆಯಲ್ಲಿ ವೇಟ್ ಲಿಫ್ಟಿಂಗ್ ಪ್ರಾರಂಭಿಸಿದ ನಂತರ ತೊಡೆಯ ಸ್ನಾಯುಗಳು ಸೆಳೆತ ಉಂಟಾಯಿತು. ಅದರಿಂದಾಗಿ ಸ್ಪರ್ಧೆ ಮುಗಿದ ಮೇಲೆ ಸ್ವಲ್ಪ ಹೊತ್ತು ನಡೆಯಲು ಆಗುತ್ತಿರಲಿಲ್ಲ ಎಂದೂ ಜೆರೆಮಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Commonwealth Games 2022: ಭಾರತಕ್ಕೆ ಎರಡನೇ ಚಿನ್ನ, ಜೆರೆಮಿ ಮುಡಿಗೆ ಬಂಗಾರ

ABOUT THE AUTHOR

...view details