ಬರ್ಮಿಂಗ್‌ಹ್ಯಾಮ್(ಯುಕೆ):ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಭುಜಬಲ ಪರಾಕ್ರಮ ಮುಂದುವರಿದಿದೆ. ಕುಸ್ತಿಯ ಎಲ್ಲ ವಿಭಾಗದಲ್ಲಿಯೂ ಭಾರತದ ಶಕ್ತಿ ಪ್ರದರ್ಶನ ಕಂಡುಬರುತ್ತಿದೆ. ಪುರುಷರ 74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕುಸ್ತಿಪಟು ನವೀನ್ ಕುಮಾರ್, ಪಾಕಿಸ್ತಾನದ ಮೊಹಮ್ಮದ್ ಷರೀಫ್ ತಾಹಿರ್ ವಿರುದ್ಧ 9-0 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಇದು ಕುಸ್ತಿಯಲ್ಲಿ ದೇಶದ ಬಂದ 12 ನೇ ಪದಕ ಎಂಬುದು ಗಮನಾರ್ಹ.
ನವೀನ್ ಮೊದಲ ಸುತ್ತಿನಲ್ಲಿ ಪಾಕ್ ಪೈಲ್ವಾನ್ನನ್ನು ಉರುಳಿಸುವ ಮೂಲಕ 2 ಪಾಯಿಂಟ್ ಪಡೆದರು. ಬಳಿಕ ಇವರ ಹಲವು ಪ್ರಯತ್ನಗಳಿಗೆ ತಾಹಿರ್ ಸವಾಲೊಡ್ಡಿದರು. ಮೊದಲಾರ್ಧದ ಉಳಿದ ಸಮಯದಲ್ಲಿ ಇಬ್ಬರೂ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋದರು. ದ್ವಿತೀಯಾರ್ಧದಲ್ಲಿ ಪಾಕಿಸ್ತಾನದ ಆಟಗಾರನ ಎಲ್ಲ ಪಟ್ಟುಗಳನ್ನು ಬೇಧಿಸಿದ ಚಾಣಾಕ್ಷ ಜಟ್ಟಿ ನವೀನ್ ಸತತವಾಗಿ 8 ಪಾಯಿಂಟ್ ತನ್ನ ಖಾತೆಗೆ ಹಾಕಿಕೊಂಡರು. ಈ ವೇಳೆ ಆದ ಒಂದು ಫೌಲ್ನಿಂದ ಅವರು 1 ಅಂಕ ಕಳೆದುಕೊಳ್ಳಬೇಕಾಯ್ತು. ಆದರೂ ಪಟ್ಟು ಬಿಡದ ನವೀನ್ ಆಕ್ರಮಣಕಾರಿ ಆಟವಾಡಿದರು.