ನವದೆಹಲಿ:ಭಾರತ ಪುರುಷರ ಫುಟ್ಬಾಲ್ ತಂಡ ದಾಖಲೆಯ 9ನೇ ಬಾರಿಗೆ ಸ್ಯಾಫ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ತಾರೆಯರು ಸೇರಿದಂತೆ ಕ್ರೀಡಾ ಲೋಕವೇ ಮೆಚ್ಚುಗೆಯ ಸುರಿಮಳೆ ಸುರಿದಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಕುವೈತ್ ತಂಡವನ್ನು ಸೋಲಿಸಿದ ಸುನಿಲ್ ಚೆಟ್ರಿ ನೇತೃತ್ವದ ಟೀಂ ಸಂಭ್ರಮಾಚರಣೆ ಮಾಡಿತು. ಸ್ಯಾಫ್ ಕಪ್ನಲ್ಲಿ ತನಗೆ ಸರಿಸಾಟಿಯೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿತು.
ನಿಮ್ಮ ಆಟ ಬೇರೆಯವರಿಗೆ ಸ್ಫೂರ್ತಿ:ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿದೆ. ಬ್ಲ್ಯೂ ಟೈಗರ್ಸ್ ಅಧಿಕಾರಯುತ ಗೆಲುವು ಪಡೆದರು. ಆಟಗಾರರಿಗೆ ಅಭಿನಂದನೆಗಳು. ತಂಡದ ಗಮನಾರ್ಹ ಪ್ರದರ್ಶನ ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನಾವು ಮತ್ತೊಮ್ಮೆ ಸಾಧಿಸಿದೆವು. ಕುವೈತ್‌ನೊಂದಿಗಿನ ರೋಚಕ ಫೈನಲ್ ಕದನದಲ್ಲಿ ದಾಖಲೆಯ 9 ನೇ ಸ್ಯಾಫ್ ಕಪ್ ಗೆದ್ದ ಚಾಂಪಿಯನ್ ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಜಯ್ ಶಾ ಅಭಿನಂದನೆ: ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ 9ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಫುಟ್ಬಾಲ್ ತಂಡಕ್ಕೆ ಅಭಿನಂದನೆಗಳು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಹೆಮ್ಮೆ ತಂದಿದೆ- ದಿನೇಶ್ ಕಾರ್ತಿಕ್: ವಿಕೆಟ್‌ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ರೋಚಕ ಫೈನಲ್ನಲ್ಲಿ ತಂಡ ಗೆದ್ದಿದ್ದಕ್ಕಾಗಿ ಅಭಿನಂದಿಸಿದರು. ಟೀಂ ಇಂಡಿಯಾ ಅದ್ಭುತ ಆಟವಾಡಿದ್ದೀರಿ. ಎಂತಹ ಥ್ರಿಲ್ಲಿಂಗ್ ಗೆಲುವು. ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ನಿಮ್ಮ ಆಟ ನಮಗೆ ಹಮ್ಮೆ ತಂದಿದೆ ಎಂದು ಟ್ವೀಟಿಸಿದ್ದಾರೆ.
ಮುಂಬೈ ಇಂಡಿಯನ್ಸ್, ಆರ್‌ಸಿಬಿ ಮೆಚ್ಚುಗೆ: ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ತಂಡದ ಕೌಶಲ್ಯ ಮತ್ತು ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಇದಲ್ಲದೇ, ಐಪಿಎಲ್ ತಂಡಗಳ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹಿತ ಭಾರತ ಫುಟ್ಬಾಲ್ ತಂಡದ ಸಾಧನೆಯನ್ನು ಹಾಡಿ ಹೊಗಳಿವೆ.
ನಾಯಕ ಸುನಿಲ್ ಚೆಟ್ರಿ ಅವರನ್ನು ಆಟಗಾರರು ಎತ್ತಿ ಹಿಡಿದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ, ಹಾರಿಸಿ.. ಹಾರಿಸಿ..ನಮ್ಮ ಬ್ಲ್ಯೂ ಟೈಗರ್ಸ್ 9ನೇ ಸಲ ಸ್ಯಾಫ್ ಚಾಂಪಿಯನ್ ಆಗಿದ್ದಾರೆ. ಅಭಿನಂದನೆಗಳು ಎಂದಿದೆ.
ಬೆಂಗಳೂರು ಎಫ್ಸಿ ಫುಟ್ಬಾಲ್ ತಂಡದ ಪರ ಆಡುವ ಸುನಿಲ್ ಚೆಟ್ರಿ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ಅಭಿನಂದನೆ ಸಲ್ಲಿಸಿದೆ. ನಮ್ಮ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಒಂಬತ್ತನೇ ಸ್ಯಾಫ್ ಕಪ್ ಅನ್ನು ತಂಡ ಎತ್ತಿ ಹಿಡಿದಿದೆ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.
ಪಂದ್ಯದ ರೋಚಕ ಕ್ಷಣಗಳು...:ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿ ಫೈನಲ್ ಕದನಕ್ಕಿಳಿದ ಭಾರತ ನಿರೀಕ್ಷೆಯಂತೆ ಆಟ ಪ್ರದರ್ಶಿಸಿತು. ಆದರೆ, ಕುವೈತ್ ತಂಡದ ದಿಟ್ಟ ಹೋರಾಟ ಸುಲಭ ಜಯಕ್ಕೆ ಅಡ್ಡಿಯುಂಟು ಮಾಡಿತು. ಆಟದ ಮೊದಲಾರ್ಧದ 14 ನೇ ನಿಮಿಷದಲ್ಲಿ ಕುವೈತ್ನ ಶಬೈಬ್ ಗೋಲು ಬಾರಿಸುವ ಮುನ್ನಡೆ ತಂದರು. ಇದಾದ ಬಳಿಕ ಭಾರತದ ಚಾಂಗ್ಟೆ 39 ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಇತ್ತಂಡಗಳು ಎಷ್ಟೇ ಪ್ರಯತ್ನ ಪಟ್ಟರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಇದರಿಂದ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು. ಅಲ್ಲೂ ಫಲಿತಾಂಶ ಹೊರಬೀಳಲಿಲ್ಲ. ಇದರಿಂದ ಪೆನಾಲ್ಟಿ ಶೂಟೌಟ್ ನಡೆಸಲಾಯಿತು.
ಶೂಟೌಟ್ನಲ್ಲೂ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿದವು. ಇದರಿಂದ 4-4 ರಲ್ಲಿ ಸಮಬಲಗೊಂಡಿತು. ಇದು ಪಂದ್ಯದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿತು. ಸಡನ್ಡೆತ್ ಪೆನಾಲ್ಟಿಯಲ್ಲಿ ಯಶ ಸಾಧಿಸಿದ ಭಾರತ ವಿಜಯದುಂದುಬಿ ಮೊಳಗಿಸಿತು. ಸುನಿಲ್ ಚೆಟ್ರಿ ನೇತೃತ್ವದ ತಂಡ 9 ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.
ಇದನ್ನೂ ಓದಿ:SAFF Championships: ಕುವೈತ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಗೆಲುವು: 9ನೇ ಬಾರಿಗೆ ಪ್ರಶಸ್ತಿ ಗರಿ