ಯೂಜೀನ್ (ಒರೆಗನ್,ಅಮೆರಿಕ):ಟೋಕಿಯೋ ಒಲಿಂಪಿಕ್ಸ್ ಚಿನ್ನದ ಸಾಧಕ ನೀರಜ್ ಚೋಪ್ರಾ ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇಂದು ರಜತ ಪದಕ ಪಡೆದಿದ್ದಾರೆ. ದೇಶದ ಹೆಮ್ಮೆಯ ಕುವರನ ಈ ಸಾಧನೆಗೆ ಪೋಷಕರು, ರಾಜಕೀಯ ಗಣ್ಯರು ಸೇರಿದಂತೆ ಇಡೀ ರಾಷ್ಟ್ರವೇ ಸಂತಸ ವ್ಯಕ್ತಪಡಿಸುತ್ತಿದೆ.
"ವಿಶ್ವ ಅಥ್ಲೆಟಿಕ್ಸ್ನಲ್ಲಿ ನನ್ನ ಮಗ ಪದಕ ಗೆಲ್ಲುತ್ತಾನೆ ಎಂಬ ಖಚಿತತೆ ಇತ್ತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ಚಿನ್ನ ಗೆಲ್ಲುತ್ತಾನೆ ಎಂದು ಭಾವಿಸಿದ್ದೆವು. ರಜತ ಪದಕ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ" ಎಂದು ಮಗನ ಸಾಧನೆಯನ್ನು ತಾಯಿ ಸರೋಜ್ದೇವಿ ಹೊಗಳಿದರು.
ಪ್ರಧಾನಿ ಮೋದಿ ಶುಭಾಶಯ:"ದೇಶದ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟು ಒಬ್ಬರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವುದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣವಾಗಿದೆ. ಮುಂಬರುವ ಅವರ ಎಲ್ಲ ಪ್ರಯತ್ನಗಳಿಗೆ ಶುಭ ಕೋರಿಕೆ" ಎಂದು ಟ್ವೀಟ್ ಮಾಡಿದ್ದಾರೆ.
ಕ್ರೀಡಾ ಇಲಾಖೆ ಬಹುಪರಾಕ್:ಚೋಪ್ರಾರ ಬೆಳ್ಳಿ ಪದಕ ವಿಕ್ರಮಕ್ಕೆ ಕ್ರೀಡಾ ಇಲಾಖೆ ಬಹುಪರಾಕ್ ಹೇಳಿದೆ. "ವಿಶ್ವ ಅಥ್ಲೆಟಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಅವರು ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಸಾಧಕನಿಗೆ ಅಭಿನಂದನೆಗಳು" ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.