ನವದೆಹಲಿ:ಈ ವರ್ಷದ ಅಂತ್ಯದಲ್ಲಿ ನಡೆಯುವ ಮುಂದಿನ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್(ಕೆಐಯುಜಿ) ಕರ್ನಾಟಕದಲ್ಲಿ ಅದ್ಭುತ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ ರಿಜಿಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಕರ್ನಾಟಕದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕಿರಣ್ ರಿಜಿಜು ಭಾನುವಾರ ಘೋಷಿಸಿದ್ದರು.
ಈ ಕ್ರೀಡಾಕೂಟ ಬೆಂಗಳೂರಿನ ಜೈನ್ ಯೂನಿವರ್ಸಿಟಿ ಮತ್ತು ರಾಜ್ಯದ ಬೇರೆ ಸ್ಥಳಗಳಲ್ಲಿ ಅಸೋಸಿಯೇಷನ್ ಆಫ್ ಯುನಿವರ್ಸಿಟಿ ಸಹಯೋಗದಲ್ಲಿ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ಕಿರಣ್ ರಿಜಿಜು, ರಾಜ್ಯದಲ್ಲಿ ಕ್ರೀಡೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತುಂಬಾ ಬೆಂಬಲ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಕರ್ನಾಟಕ ಮುಂದಿನ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಕ್ರೀಡಾಕೂಟವನ್ನು ಅದ್ಭುತವಾಗಿ, ಯಶಸ್ವಿಯಾಗಿ ನಡೆಸಲಿದೆ ಎಂದು ನನಗೆ ವಿಶ್ವಾಸವಿದೆ. ಕ್ರೀಡೆಗೆ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹ ಶ್ಲಾಘನೀಯ. ಜೈನ್ ಯುನಿವರ್ಸಿಟಿ ಸ್ಮರಣೀಯವಾದ ಕೆಐಯುಜಿಯನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದೆ " ಎಂದು ಟ್ವೀಟ್ ಮಾಡಿದ್ದಾರೆ.
ಕೆಐಯುಜಿ ದೇಶದ ಅತಿದೊಡ್ಡ ವಿಶ್ವವಿದ್ಯಾಲಯ ಕ್ರೀಡಾಕೂಟವಾಗಿದೆ ಮತ್ತು ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಗುರಿಯನ್ನು ಹೊಂದಿದೆ.
KIUGಯ ಮೊದಲ ಆವೃತ್ತಿಯನ್ನು ಫೆಬ್ರವರಿ 2020 ರಲ್ಲಿ ಭುವನೇಶ್ವರದಲ್ಲಿ ನಡೆಸಲಾಗಿತ್ತು. ಇದರಲ್ಲಿ ಎಲ್ಲಾ ರಾಜ್ಯಗಳ 158 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ 25 ವಯೋಮಾನದೊಳಗಿನ ಒಟ್ಟು 3,182 ಕ್ರೀಡಾಪಟುಗಳು ಭಾಗವಹಿಸಿದ್ದರು.
ಇದನ್ನು ಓದಿ:ಶಿವಮೊಗ್ಗಕ್ಕೆ ವಿಶೇಷ ಕ್ರೀಡಾ ವಲಯ ಘೋಷಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು