ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಮಹಿಳಾ ಕುಸ್ತಿಯಲ್ಲಿ ಭಾರತದ ಭರವಸೆಯ ಕ್ರೀಡಾಪಟು ವಿನೇಶ್ ಫೋಗಟ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿರುವ ಇವರು, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸತತ ಮೂರನೇ ಸಲ ಸ್ವರ್ಣ ಪದಕ ಗಳಿಸಿರುವ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ.
ಉಳಿದಂತೆ ಕುಸ್ತಿಯಲ್ಲಿ ಭಾರತದ ಪೂಜಾ ಗೆಹ್ಲೋಟ್ ಹಾಗೂ ಬಾಕ್ಸಿಂಗ್ನಲ್ಲಿ ಜೈಸ್ಮಿನ್ ಲಂಬೋರಿಯಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಸೆಮೀಸ್ನಲ್ಲಿ ಸೋಲು ಕಂಡಿದ್ದ ಪೂಜಾ ಗೆಹ್ಲೋಟ್ ಕಂಚಿಗೋಸ್ಕರ ಸ್ಕ್ಯಾಟ್ಲ್ಯಾಂಡ್ನ ಸ್ಪರ್ಧಾಳು ವಿರುದ್ಧ ಗೆಲುವು ದಾಖಲು ಮಾಡಿ ಪದಕ ಗೆದ್ದಿದ್ದಾರೆ. ಮತ್ತೊಂದೆಡೆ ಬಾಕ್ಸರ್ ಜೈಸ್ಮಿನ್ 60 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಕಂಚು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಇಲ್ಲಿಯವರೆಗೆ 11 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 33 ಪದಕ ಗೆದ್ದು, 5ನೇ ಸ್ಥಾನದಲ್ಲಿ ಮುಂದುವರೆದಿದೆ. ಕುಸ್ತಿಯಲ್ಲೇ ಭಾರತ ಇಲ್ಲಿಯವರೆಗೆ ಐದು ಪದಕ ಗೆದ್ದಿದೆ.