ಬರ್ಮಿಂಗ್ಹ್ಯಾಮ್:ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇಂದು 2 ಚಿನ್ನ ಹಾಗು 1 ಬೆಳ್ಳಿ ಪದಕ ಗೆದ್ದರು. ಕುಸ್ತಿಯಲ್ಲಿ ಪುರುಷರ 65 ಕೆಜಿ ವಿಭಾಗದ ಫೈನಲ್ನಲ್ಲಿ ಭಾರತದ ಬಜರಂಗ ಪೂನಿಯಾ ಚಿನ್ನಕ್ಕೆ ಕೊರಳೊಡ್ಡಿದರೆ, ಮಹಿಳೆಯರ ಕುಸ್ತಿ 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಚಿನ್ನ ಗೆದ್ದು ಸಂಭ್ರಮಿಸಿದರು. ಇನ್ನೊಂದೆಡೆ, 57 ಕೆಜಿ ಕುಸ್ತಿ ವಿಭಾಗದಲ್ಲಿ ಅಂಶು ಮಲಿಕ್ ಬೆಳ್ಳಿಗೆ ಮುತ್ತಿಕಿದರು.
ಈ ಮೂಲಕ ಈವರೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 8 ಚಿನ್ನ, 8 ಬೆಳ್ಳಿ ಹಾಗು 7 ಕಂಚು ಗೆದ್ದು 23 ಪದಕ ಸಾಧನೆ ಮಾಡಿ 6ನೇ ಸ್ಥಾನದಲ್ಲಿದೆ.
ಚಿನ್ನ ಗೆದ್ದ ಬಜರಂಗ ಪೂನಿಯಾ: 65 ಕೆಜಿ ವಿಭಾಗದ ಫೈನಲ್ನಲ್ಲಿ ಕೆನಡಾದ ಕುಸ್ತಿಪಟು ಮೆಕ್ನೀಲ್ ಲಾಚ್ಲಾನ್ ಅವರನ್ನು ಬಜರಂಗ ಪೂನಿಯಾ ಮಣಿಸಿದರು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಳನೇ ಚಿನ್ನದ ಪದಕ ತಂದುಕೊಟ್ಟರು. ಈ ಕಳೆದ ವರ್ಷದ ಕೂಡ ಬಜರಂಗ ಚಿನ್ನದ ಪದಕಕ್ಕೆ ಗೆದ್ದಿದ್ದರು. ಇದರ ಹಿಂದಿನ ಆವೃತ್ತಿಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಒಟ್ಟಾರೆ ಕುಸ್ತಿಯಲ್ಲಿ ಹ್ಯಾಟ್ರಿಕ್ ಪದಕ ಗೆದ್ದ ಕುಸ್ತಿ ಪಟು ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
ಅಂಶು ಮಲಿಕ್ಗೆ ಬೆಳ್ಳಿ ಪದಕ:ಇತ್ತ, ಕುಸ್ತಿಯ 57 ಕೆಜಿ ವಿಭಾಗದಲ್ಲಿ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ಗೆದ್ದಿದ್ದಾರೆ. ನೈಜೀರಿಯಾದ ಒಡುನಾಯೊ ಫೋಲಸಾಡೆ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಂಶು ಮಲಿಕ್ ಈ ಸಾಧನೆ ತೋರಿದರು. ವಿಶೇಷವೆಂದರೆ ಇಂದು ಅಂಶು ಜನ್ಮದಿನವೂ ಆಗಿದ್ದು, ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಾರೆ.
ಪದಕ ವಿಜೇತರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.