ಹೈದರಾಬಾದ್:ಭಾರತದ ಪರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಏಕೈಕ ಕುಸ್ತಿಪಟು ಸುಶೀಲ್ ಕುಮಾರ್ ಕಮಾಂಡೋ-3 ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಆದಿತ್ಯ ದತ್ ನಿರ್ದೇಶನದ ಕಮಾಂಡೋ-3 ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿದ್ಯುತ್ ಜಮ್ವಾಲ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದಲ್ಲಿನ ದೃಶ್ಯವೊಂದರಲ್ಲಿ ಕುಸ್ತಿಪಟು ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಈ ದೃಶ್ಯದ ಬಗ್ಗೆ ಕುಸ್ತಿ ಪಟು ಸುಶೀಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಕುಸ್ತಿಪಟುವೊಬ್ಬ ಸಾರ್ವಜನಿಕವಾಗಿ ಬಾಲಕಿಯ ಸ್ಕರ್ಟ್ಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸುವ ದೃಶ್ಯವಿದೆ. ಇದನ್ನ ಕಂಡು ಸುಶೀಲ್ ಕುಮಾರ್ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಶೀಲ್, 'ಆದಿತ್ಯ ದತ್ ಅವರೇ ನಿಮ್ಮ ಚಿತ್ರದ ಟ್ರೇಲರ್ ನೋಡಿದೆ. ನಿಮ್ಮ ನಿರ್ದೇಶನದ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ಒಬ್ಬ ಕ್ರೀಡಾಪಟುವನ್ನ ತಪ್ಪಾಗಿ ನಿರೂಪಿಸುವುದನ್ನ ಬಿಡಿ. ನಾವು ಕಷ್ಟ ಪಡುವುದು ದೇಶಕ್ಕೆ ಪದಕ ತಂದುಕೊಡಲು. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದನ್ನ ನಾನು ಖಂಡಿಸುತ್ತೇನೆ. ಆದರೆ ಪ್ರತಿಯೊಂದನ್ನೂ ತಪ್ಪಾಗಿ ನಿರೂಪಿಸುವುದು ಪರಿಹಾರವಲ್ಲ' ಎಂದಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಕುಸ್ತಿಪಟುಗಳು ಉತ್ತಮ ನೈತಿಕ ಗುಣ ಹೊಂದಿರುವ ಸಮಾಜದ ಗೌರವಾನ್ವಿತ ಜನ. ನಾನು ಈ ದೃಶ್ಯವನ್ನು ಬಲವಾಗಿ ಖಂಡಿಸುತ್ತೇನೆ. ಕುಸ್ತಿಪಟುವನ್ನ ಅವಮಾನಿಸಿರುವ ಚಿತ್ರತಂಡ ಕ್ಷಮೆ ಕೇಳಬೇಕು. ಅಲ್ಲದೆ ಈ ದೃಶ್ಯವನ್ನ ಚಿತ್ರದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.