ಭುವನೇಶ್ವರ (ಒಡಿಶಾ): ಚೀನಾದ ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ 2023ರಲ್ಲಿ ಒಡಿಶಾದ ಜಾವೆಲಿನ್ ತಾರೆ ಕಿಶೋರ್ ಕುಮಾರ್ ಜೆನಾ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಕಿಶೋರ್ ವೈಯಕ್ತಿಕ ದಾಖಲೆಯ ದೂರ ದಾಖಲಿಸುವ ಮೂಲಕ ದೇಶಕ್ಕೆ ಬೆಳ್ಳಿ ಪದಕ ಗೆದ್ದರು. ಅಲ್ಲದೇ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಈ ಅದ್ಭುತ ಸಾಧನೆಗಾಗಿ ಒಡಿಶಾದ ಜಾವೆಲಿನ್ ತಾರೆ ಕಿಶೋರ್ ಕುಮಾರ್ ಜೆನಾ ಅವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ 1.5 ಕೋಟಿ ರೂಪಾಯಿ ಬಹುಮಾನದ ಚೆಕ್ ನೀಡಿ ಸನ್ಮಾನಿಸಿದರು.
19ನೇ ಏಷ್ಯಾಡ್ನಲ್ಲಿ ಭಾರತ ಅಥ್ಲೆಟಿಕ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿತು. ಜಾವೆಲಿನ್ ಥ್ರೋದಲ್ಲಿ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಚಿನ್ನ ಗೆದ್ದರೆ, ಕಿಶೋರ್ ಬೆಳ್ಳಿ ಗೆದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್ಗಳ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು. ಜೆನಾ ವೈಯಕ್ತಿಕ ಅತ್ಯುತ್ತಮ 87.54 ಮೀಟರ್‌ಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದರು.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಿಶೋರ್ ಕುಮಾರ್ ಜೆನಾ ಒಡಿಶಾ ರಾಜ್ಯಕ್ಕೆ ಹೆಮ್ಮೆಯ ಮೂಲವಾಗಿದೆ ಎಂದು ಪುನರುಚ್ಚರಿಸಿದರು. ವಿಶೇಷ ಸಾಧನೆಗಾಗಿ ಅವರನ್ನು ಶ್ಲಾಘಿಸಿದರು. ಜೆನಾ ಅವರು ರಾಜ್ಯಕ್ಕೆ ಇನ್ನಷ್ಟು ಪ್ರಶಸ್ತಿ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಶುಭ ಹಾರೈಸಿದರು. ಕಿಶೋರ್ ಮಾತನಾಡಿ, ತಮ್ಮ ಪ್ರಯತ್ನ ಮತ್ತು ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಿದರು.