ಬೀಜಿಂಗ್ :ಫೆಬ್ರವರಿಯಲ್ಲಿ ಬೀಜಿಂಗ್ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್ಗೆ ಅಮೆರಿಕಾ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿರುವುದು ಒಲಿಂಪಿಕ್ ಸ್ಪೂರ್ತಿಯ ಉಲ್ಲಂಘನೆ ಎಂದು ಚೀನಾ ಮಂಗಳವಾರ ಅಸಮಾಧಾನ ಹೊರ ಹಾಕಿದೆ. ಮಾನವ ಹಕ್ಕುಗಳ ಕಾಳಜಿಯ ಮೇಲೆ ತನ್ನ ಅಧಿಕಾರಿಗಳನ್ನು ಕ್ರೀಡಾಕೂಟಕ್ಕೆ ಕಳುಹಿಸದಿರುವ ಬಿಡೆನ್ ನಿರ್ಧಾರ ಎರಡೂ ದೇಶಗಳ ನಡುವಿನ ದ್ವೇಷವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಸೈದ್ಧಾಂತಿಕ ಪೂರ್ವಾಗ್ರಹ ಹಾಗೂ ಸುಳ್ಳು ಮತ್ತು ವದಂತಿಗಳ ಆಧಾರದ ಮೇಲೆ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಹಸ್ತಕ್ಷೇಪ ಮಾಡಲು ಯುಎಸ್ ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೆ ಈ ಬಹಿಷ್ಕಾರ ಘೋಷಣೆ ಒಲಿಂಪಿಕ್ ಸ್ಥಾಪಿಸಿಕೊಂಡಿರುವ ಕ್ರೀಡೆಗಳ ರಾಜಕೀಯ ತಟಸ್ಥತೆಯ ತತ್ವವನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು ಒಲಿಂಪಿಕ್ ಧ್ಯೇಯವಾಕ್ಯಕ್ಕೆ ವಿರೋಧವಾಗಿದೆ ಎಂದು ಝಾವೊ ಹೇಳಿದ್ದಾರೆ. ಸೋಮವಾರ 2022ರಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ಯುಎಸ್ ಸರ್ಕಾರ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿತ್ತು. ಕ್ರೀಡಾಕೂಟದಲ್ಲಿಅಮೆರಿಕ ಸರ್ಕಾರದ ಯಾವುದೇ ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ ಎಂದು ಜೋ ಬೈಡನ್ ಆಡಳಿತ ಸ್ಪಷ್ಟಪಡಿಸಿತ್ತು.