ಚಾಂಗ್‌ಝೌ(ಚೀನಾ): ಬುಧವಾರ ಇಲ್ಲಿ ನಡೆದ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆರಂಭಿಕ ಸುತ್ತಿನಲ್ಲಿ ಸೋಲು ಅನುಭವಿಸಿದರು. ವಿಶ್ವದ ಎರಡನೇ ಶ್ರೇಯಾಂಕಿತ ಭಾರತದ ಜೋಡಿ, 13ನೇ ಶ್ರೇಯಾಂಕದ ಇಂಡೋನೇಷ್ಯಾದ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಮೌಲಾನಾ ಬಗಾಸ್ ಜೋಡಿಯ ವಿರುದ್ಧ ಒಂದು ಗಂಟೆ ಎಂಟು ನಿಮಿಷಗಳ ಆಟದಲ್ಲಿ 17-21, 21-11, 17-21 ರಿಂದ ಸೋತರು. ಈ ಜೋಡಿಯ ಸೋಲಿನ ನಂತರ ಚೀನಾ ಓಪನ್ ಭಾರತೀಯ ಸ್ಪರ್ಧೆ ಅಂತ್ಯವಾಯಿತು.
ಮೊದಲ ಸೆಟ್ನಲ್ಲಿ 17-21ರಲ್ಲಿ ಕಳೆದುಕೊಂಡ ನಂತರ, ಭಾರತ ಜೋಡಿ ಎರಡನೇ ಸೆಟ್ನಲ್ಲಿ ಪುಟಿದೇದ್ದು 21-11 ರಿಂದ ಗೇಮ್ ವಶಪಡಿಸಿಕೊಂಡಿತು. ಇದರಿಂದ ಪಂದ್ಯದ ಗೆಲುವಿನ ನಿರ್ಣಯಕ್ಕೆ ಮೂರನೇ ಸೆಟ್ ಆಡಿಸುವ ಅಗತ್ಯ ಎದುರಾಯಿತು. ನಿರ್ಣಾಯಕ ಪಂದ್ಯದಲ್ಲಿ, ಇಂಡೋನೇಷ್ಯಾ ಜೋಡಿ ಭಾರತೀಯರಿಗೆ ಗೆಲ್ಲಲು ಬಿಡಲಿಲ್ಲ. ಕೊನೆಯ ಹಂತದಲ್ಲಿ 21-17 ರಿಂದ ಪಂದ್ಯವನ್ನು ವಶಪಡಿಸಿಕೊಂಡರು.
ಇಂಡೋನೇಷಿಯಾದ ಜಜೋಡಿಯ ಎದುರು ಭಾರತದ ಸಾತ್ವಿಕ್-ಚಿರಾಗ್ಗೆ ಈ ವರ್ಷದ ಮೂರನೇ ಸೋಲಾಗಿದೆ. ಈ ಮೊದಲು ಜೂನ್‌ನಲ್ಲಿ ಥೈಲ್ಯಾಂಡ್ ಓಪನ್‌ನ ಪ್ರಿ ಕ್ವಾರ್ಟರ್‌ಫೈನಲ್ ಮತ್ತು ಜನವರಿಯಲ್ಲಿ ಮಲೇಷ್ಯಾ ಓಪನ್‌ನಲ್ಲಿ ಸೋಲು ಕಂಡಿದ್ದರು. ಸ್ವಿಸ್ ಓಪನ್ ಸೂಪರ್ 300, ಕೊರಿಯಾ ಓಪನ್ ಮತ್ತು ಇಂಡೋನೇಷ್ಯಾ ಓಪನ್, ತಮ್ಮ ಚೊಚ್ಚಲ ಸೂಪರ್ 1000 ಪ್ರಶಸ್ತಿಯನ್ನು ಮೂರು ಪ್ರಶಸ್ತಿಗಳನ್ನು ಗೆದ್ದಿರುವ ಭಾರತೀಯ ಸಾತ್ವಿಕ್-ಚಿರಾಗ್ ಜೋಡಿ ಅತ್ಯತ್ತಮ ಪ್ರದರ್ಶನ ನೀಡಿ ಪಾರ್ಮ್ನಲ್ಲಿದ್ದರು.