ಭುವನೇಶ್ವರ:ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಭಾರತ ದಾಖಲೆಯ ಚಿನ್ನ ಮತ್ತು ಬೆಳ್ಳಿಯನ್ನು ತನ್ನದಾಗಿಸಿಕೊಂಡಿದೆ. ಭಾರತದ ಭರ್ಚಿ ದೊರೆ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಬಾರಿಗೆ ಚಿನ್ನ ಗೆದ್ದರೆ, ದೇಶದ ಇನ್ನೊಬ್ಬ ಪ್ರತಿಭೆ ಒಡಿಶಾದ ಕಿಶೋರ್ ಕುಮಾರ್ ಜೆನಾ ಬೆಳ್ಳಿ ಪದಕ ಜಯಿಸಿದರು. ನೀರಜ್ಗೆ ಟಕ್ಕರ್ ನೀಡುವಂತೆ ಭರ್ಚಿ ಎಸೆದ ಕಿಶೋರ್‌ಗೆ ಸಿಎಂ ನವೀನ್ ಪಟ್ನಾಯಕ್ ಸರ್ಕಾರ 1.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.
ಕ್ರೀಡಾಕೂಟದ ಫೈನಲ್ನಲ್ಲಿ ಬೇರೆಲ್ಲಾ ಆಟಗಾರರಿಗಿಂತ ನೀರಜ್ ಜೊತೆಗೆ ಸೆಣಸಾಟ ನಡೆಸಿದಂತೆ ತೋರಿದ ಕಿಶೋರ್ ಕುಮಾರ್ ಆರಂಭದಲ್ಲಿ 87.54 ಮೀಟರ್ ದೂರ ಭರ್ಜಿ ಎಸೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಈ ಮೂಲಕ ವೈಯಕ್ತಿಕ ಗರಿಷ್ಠ ದಾಖಲೆಯನ್ನೂ ಬರೆದರು. ಆದರೆ ಕೊನೆಯಲ್ಲಿ ಚೋಪ್ರಾ 88.88 ಮೀಟರ್ ಜಾವೆಲಿನ್ ಎಸೆದು ಬಂಗಾರಕ್ಕೆ ಕೊರಳೊಡ್ಡಿದರು.
ಆದರೆ, ಕ್ರೀಡಾಕೂಟದಲ್ಲಿ ಕಿಶೋರ್ ಕುಮಾರ್ ತೋರಿದ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿದೆ. ವೈಯಕ್ತಿಕ ಗರಿಷ್ಠ ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಬೆಳ್ಳಿ ಪದಕದೊಂದಿಗೆ ಕಿಶೋರ್ ಒಡಿಶಾ ಮತ್ತು ದೇಶಕ್ಕೆ ಕೀರ್ತಿ ತಂದಿದ್ದು, ಅಲ್ಲಿನ ಸರ್ಕಾರ ಅವರಿಗೆ ಬಹುಮಾನ ಘೋಷಿಸಿದೆ.
ಒಡಿಶಾಕ್ಕೆ ಹೆಮ್ಮೆ ತಂದ ಕಿಶೋರ್:ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ನವೀನ್ ಪಟ್ನಾಯಕ್, ಒಡಿಶಾದ ಜಾವೆಲಿನ್ ಥ್ರೋವರ್ ಕಿಶೋರ್ ಕುಮಾರ್ ಜೆನಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಮುಂದಿನ ಕೂಟಗಳಲ್ಲಿ ಉದಯೋನ್ಮುಖ ಕ್ರೀಡಾಪಟುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಕಿಶೋರ್ ಅದ್ಬುತ ಪ್ರದರ್ಶನ, ಪರಿಶ್ರಮ ಮತ್ತು ಸಂಕಲ್ಪವನ್ನು ಗುರುತಿಸಿ ಅವರಿಗೆ ಸರ್ಕಾರ 1.5 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ತಂದು, ಕ್ರೀಡಾ ಇತಿಹಾಸದಲ್ಲಿ ಬೆಳೆಗಲಿ. ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಕಿಶೋರ್‌ಗೆ ಎಲ್ಲಾ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಕಿಶೋರ್ ಭರ್ಚಿ ಎಸೆತ ಹೀಗಿತ್ತು:ನೀರಜ್ ಚೋಪ್ರಾ ಜೊತೆಗೆ ಕಣಕ್ಕಿಳಿದಿದ್ದ ಕಿಶೋರ್ ಕುಮಾರ್ ಜೆನಾ ಆರಂಭದಿಂದಲೂ ಉತ್ತಮ ಬಾಹುಬಲ ಪ್ರದರ್ಶನ ನೀಡಿದರು. ಮೊದಲ ಎಸೆತದಲ್ಲಿಯೇ ಅವರು 81.26 ಮೀಟರ್ ದೂರ ಜಾವೆಲಿನ್ ಎಸೆದರು. ಬಳಿಕ ಎರಡನೇ ಎಸೆತದಲ್ಲಿ 79.76 ಮೀ, ಮೂರನೇ ಬಾರಿಗೆ 86.77 ಎಸೆದರು. ಇದು ಅವರ ವೈಯಕ್ತಿಕ ಉತ್ತಮವಾಗಿತ್ತು. ಬಳಿಕ ಎಸೆತದಲ್ಲೇ 87.54 ಮೀಟರ್ ದೂರ ಭರ್ಚಿಯನ್ನು ಚಿಮ್ಮಿಸಿ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇದಾದ ಬಳಿಕ 84.49 ಮೀಟರ್ ಎಸೆದರೆ, ಕೊನೆಯ ಪ್ರಯತ್ನ ಫೌಲ್ ಮಾಡಿದರು.
ಇದನ್ನೂ ಓದಿ:ಏಷ್ಯನ್ ಗೇಮ್ಸ್, ಜಾವೆಲಿನ್ ಥ್ರೋ: ನೀರಜ್ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್; 4x400 ಮೀ ರಿಲೇಯಲ್ಲಿ ಚಿನ್ನ