ಬಾಕು (ಅಜರ್ಬೈಜಾನ್): ತೀವ್ರ ಕುತೂಹಲ ಕೆರಳಿಸಿದ್ದ ಫಿಡೆ ಚೆಸ್ ವಿಶ್ವಕಪ್ನಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುರುವಾರ ನಡೆದ ಟೈ-ಬ್ರೇಕ್ ಪಂದ್ಯದಲ್ಲಿ ಭಾರತದ ಆರ್.ಪ್ರಜ್ಞಾನಂದ ವೀರೋಚಿತ ಸೋಲು ಕಂಡಿದ್ದು, ಫಿಡೆ ಚೆಸ್ ವಿಶ್ವಕಪ್ ರನ್ನರ್ ಅಪ್ ಪ್ರಶಸ್ತಿಯಾದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಭಾರತದ ಭರವಸೆಯ ಆಟಗಾರ, 18 ವರ್ಷದ ಆರ್. ಪ್ರಜ್ಞಾನಂದ ಎರಡು ದಿನಗಳಿಂದ ನಾರ್ವೆಯ ಅಗ್ರ ಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಪರಿಣಾಮ ಸತತ ಎರಡು ದಿನಗಳ ಕಾಲ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಇಂದು ಅಲ್ಪಾವಧಿಯ ಟೈ-ಬ್ರೇಕ್ ಪಂದ್ಯ ನಡೆಸಲಾಯಿತು.
ಮೊದಲ ಎರಡು ಪಂದ್ಯಗಳಲ್ಲಿ ಆಟಗಾರರು ತಲಾ 25 ನಿಮಿಷಗಳ ಸಮಯ ಹೊಂದಿದ್ದರು. ಈ ವೇಳೆ, ಪ್ರತಿ 10 ಸೆಕೆಂಡ್ಗಳಿಗೆ ಕಾಯಿಗಳನ್ನು ಮೂವ್ ಮಾಡಬೇಕಾಗಿತ್ತು. ಟೈ-ಬ್ರೇಕ್‌ನ ಮೊದಲ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಮ್ಯಾಗ್ನಸ್ ಕಾರ್ಲ್‌ಸನ್ ಮೇಲುಗೈ ಸಾಧಿಸಿದರು. ಇದರಿಂದ ಪ್ರಜ್ಞಾನಂದ ಒತ್ತಡಕ್ಕೆ ಸಿಲುಕಿದ್ದರು. ಅಂತಿಮವಾಗಿ, 1.5-0.5 ಅಂತರದಿಂದ ಕಾರ್ಲ್‌ಸನ್ ಗೆದ್ದು ಸಂಭ್ರಮಿಸಿದರು.
ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಹಿಕರು ನಕಮುರಾ ಹಾಗೂ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಪ್ರಶಸ್ತಿ ಗೆಲ್ಲಲು ತೀವ್ರ ಹಣಾಹಣಿ ನಡೆಸಿದ್ದರು. ಎರಡು ದಿನಗಳ ಕಾಲ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದೇ ಪ್ರಜ್ಞಾನಂದ ವೀರೋಚಿತ ಆಟಕ್ಕೆ ಸಾಕ್ಷಿಯಾಗಿತ್ತು.
ಇದೇ ಕಾರಣದಿಂದ ಮೂರನೇ ದಿನ ಟೈ-ಬ್ರೇಕ್ಗೆ ಪಂದ್ಯ ಸಾಗಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದರೆ ಚೆಸ್ ವಿಶ್ವಕಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗುತ್ತಿದ್ದರು. ಆದರೆ, 18 ವರ್ಷದ ಪ್ರಜ್ಞಾನಂದ ಒಡ್ಡಿದ್ದ ಕಠಿಣ ಸವಾಲನ್ನು 32 ವರ್ಷದ ಕಾರ್ಲ್‌ಸನ್ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು. ಟೈ-ಬ್ರೇಕ್‌ನ ಮೊದಲ ಪಂದ್ಯದಲ್ಲಿ 45 ನಡೆಗಳಿಂದ ಕಾರ್ಲ್‌ಸನ್ ಗೆದ್ದಿದ್ದರು. ಎರಡನೇ ಪಂದ್ಯ 22 ನಡೆಗಳೊಂದಿಗೆ ಡ್ರಾ ಕಂಡಿತ್ತು. ಆದರೆ, ಮೊದಲ ಪಂದ್ಯ ಗೆದ್ದಿದ್ದ ಕಾರ್ಲ್‌ಸನ್ ಎಚ್ಚರಿಕೆಯಿಂದ ಆಡುವ ಮೂಲಕ ಮೊದಲ ಚೆಸ್ ವಿಶ್ವಕಪ್ ಗೆದ್ದರು.
ಈ ಫಲಿತಾಂಶದ ಮೂಲಕ, ಪ್ರಜ್ಞಾನಂದ ಕೆನಡಾದಲ್ಲಿ ಮುಂದಿನ ವರ್ಷ ನಡೆಯುವ ಕ್ಯಾಂಡಿಡೇಟ್ಸ್ 2024 ಚೆಸ್ ಟೂರ್ನ್‌ಮೆಂಟ್‌ಗೆ ಅರ್ಹತೆ ಪಡೆದರು. ಈ ಪಂದ್ಯಾವಳಿಗೆ ಅರ್ಹತೆ ಪಡೆದ ಜಗತ್ತಿನ 3ನೇ ಅತಿ ಕಿರಿಯ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಬಾಬಿ ಫಿಶರ್ ಮತ್ತು ಕಾರ್ಲ್‌ಸನ್ ಅರ್ಹತೆ ಪಡೆದ ಕಿರಿಯ ಆಟಗಾರರಾಗಿದ್ದರು.
ಇದನ್ನೂ ಓದಿ:ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪರಮ್‌ಜೀತ್