ಕರ್ನಾಟಕ

karnataka

ಕುಸ್ತಿ ಫೆಡರೇಷನ್​ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಕೇಸ್​: ಕುಸ್ತಿಪಟುಗಳ ಮರು ಹೋರಾಟ

By

Published : Apr 24, 2023, 1:10 PM IST

Updated : Apr 24, 2023, 1:24 PM IST

ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್​ ವಿರುದ್ಧ ಕುಸ್ತಿಪಟುಗಳು ಮತ್ತೆ ಹೋರಾಟ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಬ್ರಿಜ್​ ಭೂಷಣ್​ ವಿರುದ್ಧ ಮತ್ತೆ ಕುಸ್ತಿಪಟುಗಳ ಹೋರಾಟ
ಬ್ರಿಜ್​ ಭೂಷಣ್​ ವಿರುದ್ಧ ಮತ್ತೆ ಕುಸ್ತಿಪಟುಗಳ ಹೋರಾಟ

ನವದೆಹಲಿ:ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್​ ವಿರುದ್ಧ ಕಿರಿಯ ಮತ್ತು ಹಿರಿಯ 7 ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ದಾಖಲಿಸಿದ್ದಾರೆ. ಏಪ್ರಿಲ್ 21 ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೇಸ್​ ನೀಡಿ 48 ಗಂಟೆ ಕಳೆದರೂ ಎಫ್​ಐಆರ್​ ದಾಖಲಿಸಿಲ್ಲ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಇದೇ ವೇಳೆ ದೆಹಲಿ ಮಹಿಳಾ ಆಯೋಗ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.

ಕಿರುಕುಳ, ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್​ ವಿರುದ್ಧ ದೆಹಲಿಯ ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಕುಸ್ತಿಪಟು, ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಬ್ರಿಜ್​ ಭೂಷಣ್​ ವಿರುದ್ಧ ದೂರು ನೀಡಿ 48 ಗಂಟೆ ಕಳೆದರೂ, ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ತನಿಖೆಗಾಗಿ ರಚಿಸಲಾದ ಸಮಿತಿಯ ವರದಿಯನ್ನೂ ಪ್ರಕಟ ಮಾಡಿಲ್ಲ. ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜಕೀಯ ಪಕ್ಷಗಳ ಬೆಂಬಲಕ್ಕೆ ಮನವಿ:ಹಿರಿಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ರವಿ ದಹಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವರು ರಾಷ್ಟ್ರ ರಾಜಧಾನಿ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹವನ್ನು ಪುನರಾರಂಭಿಸಿದ್ದಾರೆ. ಅಲ್ಲದೇ, ಬಿಜೆಪಿ, ಕಾಂಗ್ರೆಸ್​, ಆಪ್​ ಸೇರಿದಂತೆ ಎಲ್ಲ ಪಕ್ಷಗಳು ನಮ್ಮ ನೆರವಿಗೆ ಬರಬೇಕು. ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಈ ಬಾರಿ ಯಾವುದೇ ಪಕ್ಷದ ನಾಯಕರು ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು. ಇದನ್ನು ರಾಜಕೀಯವಾಗಿ ನೋಡಬಾರದು. ಈ ಹೋರಾಟವನ್ನು ರಾಜಕೀಯ ಮಾಡಲು ಇಚ್ಛಿಸುವುದಿಲ್ಲ ಎಂದು ಪಕ್ಷಗಳಿಗೆ ಆಹ್ವಾನ ನೀಡಿದರು.

ಅಖಾಡದಿಂದ ಬೀದಿಗೆ:ತಮ್ಮ ಹೋರಾಟದ ಚಿತ್ರವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಮಹಿಳಾ ಕುಸ್ತಿಪಟು ವಿನೇಶ್​ ಪೋಗಟ್​, ಕುಸ್ತಿಪಟುಗಳು ಫುಟ್‌ಪಾತ್‌ನಲ್ಲಿ ರಾತ್ರಿ ಕಳೆದಿದ್ದೇವೆ. "ಅಖಾಡದಿಂದ ಫುಟ್​​ಪಾತ್​​ವರೆಗೆ" ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

"ತನಿಖಾ ಸಮಿತಿ ಏನು ಮಾಡುತ್ತಿದೆ ಎಂಬುದೇ ತಿಳಿದಿಲ್ಲ. ನಾವು ನ್ಯಾಯವನ್ನು ಕೇಳುತ್ತಿದ್ದೇವೆ. ಇದಕ್ಕಾಗಿ ಮತ್ತೆ ಸಾರ್ವಜನಿಕರ ಮುಂದೆ ಬಂದಿದ್ದೇವೆ. ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಫಲವಾದ ದೆಹಲಿ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ ಎಂದು ತಿಳಿಸಿದರು.

ಈ ಹಿಂದಿನ ಪ್ರತಿಭಟನೆಯ ವೇಳೆ ನೀಡಿದ ಭರವಸೆಗಳಲ್ಲಿ ಯಾವೊಂದನ್ನೂ ಬಗೆಹರಿಸಿಲ್ಲ. ತನಿಖಾ ಸಮಿತಿ ರಚನೆ ಮಾಡಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ವರದಿಗಾಗಿ ತಿಂಗಳುಗಟ್ಟಲೆ ಕಾದಿದ್ದೇವೆ. ಒಂದೇ ಒಂದು ಬೇಡಿಕೆಯನ್ನು ಈಡೇರಿಸಲಿಲ್ಲ. 7 ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಇನ್ನೊಬ್ಬ ಕುಸ್ತಿಪಟು ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.

ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಬ್ರಿಜ್​ ಭೂಷಣ್​ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಆರೋಪ ಮಾಡಿ ಜನವರಿಯಲ್ಲಿ ಮಹಿಳೆಯರೂ ಸೇರಿದಂತೆ ಹಲವು ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಪಿಎಂ(ಮಾರ್ಕ್ಸ್‌ವಾದಿ) ನಾಯಕಿ ಬೃಂದಾ ಕಾರಟ್ ಪ್ರತಿಭಟನಾ ವೇದಿಕೆಗೆ ಆಗಮಿಸಿದಾಗ ವಿರೋಧ ವ್ಯಕ್ತವಾಗಿತ್ತು.

ಇದಲ್ಲದೇ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿ, ಕ್ರಮದ ಭರವಸೆ ನೀಡಿದ ಬಳಿಕ ಹೋರಾಟವನ್ನು ಹಿಂಪಡೆದಿದ್ದರು. ಕುಸ್ತಿಪಟುಗಳ ದೂರುಗಳ ಬಗ್ಗೆ ತನಿಖೆ ನಡೆಸಲು ಕ್ರೀಡಾ ಸಚಿವಾಲಯವು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಓದಿ:ಜೀವನದ 'ಹಾಫ್​ ಸೆಂಚುರಿ' ಸಂಭ್ರಮದಲ್ಲಿ 'ಕ್ರಿಕೆಟ್​ ದೇವರು': ಸಚಿನ್ ಸಾಧನೆಗೆ ಸರಿಸಾಟಿ ಯಾರು?

Last Updated : Apr 24, 2023, 1:24 PM IST

ABOUT THE AUTHOR

...view details