ಅಮೆರಿಕ:ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸ್ಪೇನ್ನ ಯುವ ಟೆನ್ನಿಸ್ ತಾರೆ ಕಾರ್ಲೋಸ್ ಅಲ್ಕರಾಝ್ ಮತ್ತೆ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಅನುಭವಿ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಕ್ರನ್ನು ಹಿಂದಿಕ್ಕಿರುವ 19 ವರ್ಷದ ಕಾರ್ಲೋಸ್ ಪುನಃ ನಂ. 1 ಪಟ್ಟಕ್ಕೆ ಏರಿದ್ದಾರೆ.
ಭಾನುವಾರ ನಡೆದ ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ರಷ್ಯಾದ ಸ್ಟಾರ್ ಆಟಗಾರ ಡೆನಿಲ್ ಮೆಡ್ವೆಡೆವ್ರನ್ನು 6-3, 6-2 ನೇರ ಸೆಟ್ಗಳಿಂದ ಸೋಲಿಸಿದ ಕಾರ್ಲೋಸ್ ಅಲ್ಕರಾಝ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕೆ ಮರಳಿರುವ ಕಾರ್ಲೋಸ್ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಸೆಟ್ ಅನ್ನು ಕೇವಲ 36 ನಿಮಿಷಗಳಲ್ಲೇ ಗೆದ್ದ ಕಾರ್ಲೋಸ್ ಆಕ್ರಮಣಕಾರಿ ಆಟದ ಎದುರು ಮೆಡ್ವೆಡೆವ್ ಮಂಕಾದರು. ಅಲ್ಲದೆ, ಮೆಡ್ವೆಡೆವ್ರ ಸತತ 19 ಗೆಲುವುಗಳ ನಾಗಾಲೋಟಕ್ಕೆ ಬ್ರೇಕ್ ಬಿತ್ತು.
ಸ್ಪೇನ್ನ ಯುವ ತಾರೆ ಕಾರ್ಲೋಸ್ ಅಲ್ಕರಾಝ್ ತಮ್ಮ ವೃತ್ತಿಜೀವನದ ಆರಂಭದಿಂದಲೇ ಟೆನ್ನಿಸ್ ಲೋಕದ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ಅಮೆರಿಕ ಓಪನ್ ಗ್ರಾಂಡ್ಸ್ಲಾಂ ಗೆದ್ದು ನಂಬರ್ 1 ಸ್ಥಾನಕ್ಕೆ ತಲುಪಿದ್ದರು. ಮೆಡ್ವೆಡೆವ್ ವಿರುದ್ಧ 18 ವಿನ್ನರ್ಸ್ ಸಿಡಿಸಿದರು. ಬ್ರೇಕ್ ಪಾಯಿಂಟ್ ಇಲ್ಲದೆಯೇ ಪಂದ್ಯ ಮುಗಿಸಿದರಲ್ಲದೆ, ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿ ಓಪನ್ ಗೆದ್ದ ಒಂಭತನೇ ಹಾಗೂ ಅಂತ್ಯಂತ ಯುವ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜೊತೆಗೆ, ಚಿಕ್ಕ ಹರೆಯದಲ್ಲೇ ಮೂರು ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದು ತಮ್ಮದೇ ದೇಶದ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರ ಸಾಲಿಗೆ ಸೇರಿದ್ದಾರೆ. ನಡಾಲ್ ಕೂಡ 20ನೇ ವಯಸ್ಸಿಗೆ ಕಾಲಿಡುವ ಮುನ್ನವೇ 6 ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದರು.