ಮೆಲ್ಬೋರ್ನ್(ಆಸ್ಟ್ರೇಲಿಯಾ):ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಆಸ್ಟ್ರೇಲಿಯಾ ಓಪನ್ಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿದೆ. ವಿಶ್ವದ ಮಾಜಿ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್ ಜಾಕೊವಿಚ್ ಸ್ನಾಯು ಸೆಳೆತಕ್ಕೆ ತುತ್ತಾದ ಬೆನ್ನಲ್ಲೇ, ಮೊಣಕಾಲಿನ ಗಾಯದಿಂದಾಗಿ ಮಾಜಿ ಫೈನಲಿಸ್ಟ್ ಕ್ರೊವೇಷಿಯಾದ ಮರಿನ್ ಸಿಲಿಕ್ ಟೂರ್ನಿಯಿಂದಲೇ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮರಿನ್ ಸಿಲಿಕ್, ನನ್ನ ವೃತ್ತಿ ಜೀವನದ ವರ್ಷಾರಂಭ ಉತ್ತಮವಾಗಿಲ್ಲ. ಮೊಣಕಾಲಿನ ಗಾಯಕ್ಕೀಡಾಗಿದ್ದು, ಆಸ್ಟ್ರೇಲಿಯನ್ ಓಪನ್ನಿಂದ ಹಿಂದೆ ಸರಿಯುತ್ತಿದ್ದೇನೆ. ಈ ವರ್ಷ ಆಡಲು ಸಾಧ್ಯವಾಗದ ಕಾರಣ ಮುಂದಿನ ವರ್ಷ ಮತ್ತೆ ಮೆಲ್ಬೋರ್ನ್ಗೆ ಬರುವೆ. ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ. 34 ವರ್ಷದ ಕ್ರೊಯೇಷಿಯಾದ ಆಟಗಾರ 2018 ರ ಫೈನಲ್ನಲ್ಲಿ ವಿಶ್ವಶ್ರೇಷ್ಠ ಮಾಜಿ ಟೆನಿಸ್ಸಿಗ ರೋಜರ್ ಫೆಡರರ್ ವಿರುದ್ಧ ಸೋಲನುಭವಿಸಿ ರನ್ನರ್ ಅಪ್ ಆಗಿದ್ದರು.
ಭಾರತದ ಪುಣೆಯಲ್ಲಿ ಈಚೆಗೆ ನಡೆದ ಮಹಾರಾಷ್ಟ್ರ ಓಪನ್ನಲ್ಲಿ ಟೆನಿಸ್ ವರ್ಷ ಆರಂಭಿಸಿದ್ದ ಸಿಲಿಕ್ ಟ್ಯಾಲನ್ ಗ್ರೀಕ್ಸ್ಪೂರ್ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ ಮೊಣಕಾಲಿನ ಗಾಯಕ್ಕೀಡಾಗಿದ್ದರು. ಬಳಿಕ ಎಟಿಪಿ ಈವೆಂಟ್ನಿಂದ ಹಿಂದೆ ಸರಿದ ವಿಶ್ವದ 18 ನೇ ಶ್ರೇಯಾಂಕಿತ ಆಟಗಾರ ಈಗ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ನಿಂದಲೂ ಹೊರಬಿದ್ದಿದ್ದಾರೆ. ಇದಕ್ಕೂ ಮೊದಲು ವಿಶ್ವ ನಂಬರ್ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ಕೂಡ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ನೊವಾಕ್ಗೆ ಸ್ನಾಯುಸೆಳೆತದ ಭೀತಿ:ಇನ್ನೊಂದೆಡೆ, ಮಾಜಿ ವಿಶ್ವ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್ ಜಾಕೊವಿಚ್ ಕೂಡ ಗಾಯದ ಸಮಸ್ಯೆಗೀಡಾಗಿದ್ದಾರೆ. ನಿನ್ನೆ ರಷ್ಯಾ ಟೆನಿಸ್ಸಿಗ ಡೇನಿಯಲ್ ಮೆಡ್ವೆದೇವ್ ಅವರ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಸ್ನಾಯು ಸೆಳೆಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಅಡಿಲೇಡ್ ಓಪನ್ ವೇಳೆ ಸ್ನಾಯು ಸೆಳೆತಕ್ಕೀಡಾಗಿದ್ದೆ. ಇದೀಗ ನೋವು ಮತ್ತೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಇದೇ 16 ರಿಂದ ಆಸ್ಟ್ರೇಲಿಯನ್ ಓಪನ್ ಶುರುವಾಗಲಿದೆ.
ಓದಿ:ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ಅಚ್ಚರಿಯ ಆಟಗಾರ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಬಣ್ಣನೆ