ಹೈದರಾಬಾದ್:ಬದುಕು ಒಡ್ಡಿದ ಹತ್ತು ಹಲವು ಸಮಸ್ಯೆಗಳನ್ನು ಧೈರ್ಯದಿಂದ ಮೆಟ್ಟಿ ನಿಂತ ಇಲ್ಲೊಬ್ಬ ಹೈದರಾಬಾದ್‌ನ 22 ವರ್ಷದ ಯುವತಿ ಯುವ ಜನತೆಗೆ ಸ್ಫೂರ್ತಿಯ ಸೆಲೆ. ಈಕೆಯ ಹೆಸರು ಭಾಗ್ಯಲಕ್ಷ್ಮಿ ವೈಷ್ಣವ್. ಇತ್ತೀಚೆಗೆ, ಟರ್ಕಿಯಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಹಿರಿಮೆ ಅಷ್ಟೇ ಅಲ್ಲ, ತನ್ನ ಬಡ ಕುಟುಂಬಕ್ಕೂ ಬೂಸ್ಟರ್ ಡೋಸ್ ನೀಡಿದ್ದಾಳೆ. ಆದ್ರೆ ಈಕೆಯ ಸಾಧನೆಯ ಹಿಂದಿನ ಹಾದಿ ಹೂವಿನ ಹಾಸಿಗೆಯಲ್ಲ, ಅದು ಅಕ್ಷರಶ: ಮುಳ್ಳಿನ ಹಾದಿ.
ಭಾಗ್ಯಲಕ್ಷ್ಮಿ ಬಡ ಕುಟುಂಬದಿಂದ ಬಂದಿರುವ ಹೆಣ್ಣು ಮಗಳು. ತಂದೆಗೆ ಪ್ಪೈ ವುಡ್ ಅಂಗಡಿಯಲ್ಲಿ ಕೆಲಸ. ತಾಯಿ ಗೃಹಿಣಿ ಜೊತೆಗೆ ಕ್ಯಾನ್ಸರ್ ಜೊತೆ ಹೊಡೆದಾಡಿ ಬದುಕು ಸಾಗಿಸುತ್ತಿದ್ದಾರೆ. ಇದ್ದೊಬ್ಬ ಅಣ್ಣ 2015 ರಲ್ಲಿ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಒಂದೆಡೆ, ಕುಟುಂಬಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟು. ಕ್ಯಾನ್ಸರ್‌ಗೆ ಅಣ್ಣ ಪ್ರಾಣ ಕಳೆದುಕೊಂಡ ವೇದನೆ. ಮತ್ತೊಂದೆಡೆ, ಅಮ್ಮನಿಗೆ ಸ್ತನ ಕ್ಯಾನ್ಸರ್. ಇದರ ಜೊತೆಗೆ, ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಕ್ರೀಡೆ ಪವರ್ ಲಿಫ್ಟಿಂಗ್‌ನಲ್ಲಿ ಏನಾದರೂ ಸಾಧಿಸುವ ಹಂಬಲ.
ಭಾಗ್ಯಲಕ್ಷ್ಮಿ ಸ್ಫೂರ್ತಿದಾಯಕ ಮಾತುಗಳು..: ಈ ಕುರಿತು ಪ್ರತಿಕ್ರಿಯಿಸಿದ ಭಾಗ್ಯಲಕ್ಷ್ಮಿ ಆಕೆಯ ಜೀವನವನ್ನು ಎಳೆಎಳೆಯಾಗಿ ವಿವರಿಸಿದಳು. "ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ತರಬೇತಿ ಪಡೆಯುವ ಮೂಲಕ ಎಲ್ಲವೂ ಆರಂಭವಾಯಿತು. ಇಲ್ಲಿ ನಾನು ಪವರ್ ಲಿಫ್ಟಿಂಗ್‌ನಲ್ಲಿ ಜಿಲ್ಲಾ ಹಂತ, ಅಲ್ಲಿಂದ ರಾಜ್ಯ ಮಟ್ಟ ನಂತರದಲ್ಲಿ ರಾಷ್ಟ್ರ ಮಟ್ಟದಲ್ಲಿ ಅವಕಾಶಗಳು ಬಂದೊದಗಿತು. ನನಗೆ ಮೊದಲು ಮೆಡಲ್ ಬಂದಾಗ ತಕ್ಷಣ ನೆನಪಾಗಿದ್ದೇ ನನ್ನ ತಂದೆ. ಸಾಧನೆಯನ್ನು ತಾಯಿಗೆ ವಿಡಿಯೋ ಕರೆ ಮೂಲಕ ತಿಳಿಸಿದೆ. ಅವರು ಖುಷಿಯಲ್ಲಿ ಕಣ್ಣೀರಿಟ್ಟರು. ತಂದೆ ಫ್ಲೈ ವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮ್ಮ ಗೃಹಿಣಿ. ಅಣ್ಣನಿಗೆ ರಕ್ತದ ಕ್ಯಾನ್ಸರ್ ಇದ್ದ ಕಾರಣಕ್ಕೆ ತಂದೆಗೆ ತನ್ನ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಯಿತು. ಕೂಡಿಟ್ಟ ಉಳಿತಾಯವೆಲ್ಲ ಆತನ ವೈದ್ಯಕೀಯ ಖರ್ಚಿಗೆ ಸಾಲದಾಯಿತು. ಆದ್ರೂ ಅವನನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ. ಆತ 2015 ರಲ್ಲಿ ಅಸುನೀಗಿದ. ತಾಯಿಗೂ ಸ್ತನ ಕ್ಯಾನ್ಸರ್ ಇದೆ. ಆದ್ರೆ ಸುದೈವವಶಾತ್ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ತಂದೆಗೆ ವ್ಯವಹಾರದಲ್ಲಿ ನಷ್ಟ ಉಂಟಾದ ಬಳಿಕ ಅವರು ಫ್ಲೈ ವುಡ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು. ಹೀಗೆ ನಮಗೆ ಆರ್ಥಿಕವಾಗಿ ದೊಡ್ಡ ದೊಡ್ಡ ಹೊಡೆತವೇ ಬಿತ್ತು. ಪರಿಸ್ಥಿತಿ ಹೀಗಿದ್ದರೂ ನನ್ನ ಕುಟುಂಬದ ಸಹಕಾರ, ಪ್ರೋತ್ಸಾಹ ನನಗೆ ಒಂಚೂರೂ ಕಡಿಮೆಯಾಗಲಿಲ್ಲ" ಎಂದು ಹೇಳಿದರು.
"ನಮ್ಮ ಹಣಕಾಸು ಸಮಸ್ಯೆಗಳಿಂದಾಗಿ ಕೆಲವೆಡೆ ಅದ್ರಲ್ಲೂ ಮಂಗಳೂರಿನಲ್ಲಿ ನಡೆದ ಪ್ರಮುಖ ಸ್ಪರ್ಧೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ನಂತರ ತಂದೆ ಬ್ಯಾಂಕ್‌ನಿಂದ ಸಾಲ ಪಡೆದು ನನ್ನನ್ನು ಸ್ಪರ್ಧೆಗಳಿಗೆ ಕಳುಹಿಸಿಕೊಡುತ್ತಿದ್ದರು" ಎಂದು ಆಕೆ ಹೇಳಿದರು.