ಮಾಂಟ್ರಿಯಲ್: ಕೆನಡಿಯನ್ ಓಪನ್ ಮಹಿಳಾ ಸಿಂಗಲ್ಸ್ ಟೆನ್ನಿಸ್ ಫೈನಲ್‌ನಲ್ಲಿ 18 ಶ್ರೇಯಾಂಕಿತೆ ಲ್ಯುಡ್ಮಿಲಾ ಸ್ಯಾಮ್ಸೊನೊವಾ ಅವರನ್ನು 6-1, 6-0 ನೇರ ಸೆಟ್‌ನಿಂದ ಜೆಸ್ಸಿಕಾ ಪೆಗುಲಾ ಮಣಿಸಿ ಪ್ರಶಸ್ತಿ ಗೆದ್ದರು. ಪುರುಷರ ಸಿಂಗಲ್ಸ್ನಲ್ಲಿ ಇಟಾಲಿಯನ್ ಆಟಗಾರ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಮಣಿಸಿ ಚೊಚ್ಚಲ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದು ಜೆಸ್ಸಿಕಾ ವೃತ್ತಿಜೀವನದ ಮೂರನೇ ಪ್ರಶಸ್ತಿ ಮತ್ತು ಎರಡನೇ ಡಬ್ಲ್ಯುಟಿಎ 1000 ಕಿರೀಟವಾಗಿದೆ. ಇದು ಈ ವರ್ಷದ ಮೊದಲ ಪ್ರಶಸ್ತಿಯಾಗಿದೆ. ಕೆನಡಾ ಓಪನ್ನಲ್ಲಿ ಪೆಗುಲಾ ಅವರು ಮೊದಲ ಎರಡು ಸುತ್ತುಗಳಲ್ಲಿ ಯೂಲಿಯಾ ಪುಟಿನ್ಟ್ಸೆವಾ ಮತ್ತು ಜಾಸ್ಮಿನ್ ಪಾವೊಲಿನಿ ವಿರುದ್ಧ ನೇರ ಸೆಟ್ ಜಯಗಳಿಸಿದರು. ನಂತರ ಸೆಮಿಫೈನಲ್ನಲ್ಲಿ ವಿಶ್ವ ಅಗ್ರ ಶೇಯಾಂಕಿತ ಆಟಗಾರ್ತಿ 1 ಇಗಾ ಸ್ವಿಯಾಟೆಕ್ ಅವರನ್ನು ಸೋಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಡಬಲ್ಸ್ ಪಾಲುದಾರೆ ಕೊಕೊ ಗೌಫ್ ಅವರನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದರು.
"ಪ್ರಶಸ್ತಿ ಹಂತಕ್ಕೆ ತಲುಪುವವರೆಗೆ ಇಡೀ ವಾರ ಕಠಿಣ ಪಂದ್ಯಗಳನ್ನು ಎದುರಿಸಿದ್ದೇನೆ. ಅದರಲ್ಲೂ ಕೊಕೊ ಗೌಫ್ ಮತ್ತು ಇಗಾ ಅವರ ವಿರುದ್ಧ ನಿಜವಾಗಿಯೂ ಕಠಿಣ ಗೆಲುವು. ನನ್ನ ಬಳಿ ಒಂದು ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಕಡಿಮೆ ಇದೆ ಎಂಬ ಭಾವನೆ ಇತ್ತು ಇಂದು ಅದನ್ನು ಗೆದ್ದಿದ್ದೇನೆ ಸಂತೋಷವಾಗಿದೆ" ಎಂದು ಪಂದ್ಯದ ಗೆಲುವಿನ ನಂತರ ಜೆಸ್ಸಿಕಾ ಪೆಗುಲಾ ಹೇಳಿದ್ದಾರೆ.