ಕ್ಯಾಲ್ಗರಿ (ಕೆನಡಾ): ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಕೆನಡಾ ಓಪನ್‌ನಲ್ಲಿ ಫೈನಲ್ಸ್ ತಲುಪಿದ್ದಾರೆ. ಈ ಮೂಲಕ ಕೂಟದಲ್ಲಿ ಭಾರತಕ್ಕೆ ಒಂದು ಪ್ರಶಸ್ತಿ ಸಿಗುವುದು ಪಕ್ಕಾ ಆಗಿದೆ. ಕ್ವಾರ್ಟರ್ಫೈನಲ್ನಲ್ಲಿ ಗೆದ್ದು ಸೆಮಿಫೈನಲ್ ತಲುಪಿದ್ದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಫೈನಲ್ ಪ್ರವೇಶಿಸುವಲ್ಲಿ ವಿಫಲವಾದರು. ಈ ವರ್ಷದ ಪ್ರಥಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಅವರು ಸೋತಿದ್ದಾರೆ.
ಲಕ್ಷ್ಯ ಸೇನ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-17, 21-14ರ ಎರಡು ನೇರ ಗೇಮ್‌ಗಳಿಂದ ಸೋಲಿಸಿದರು. ಇದರಿಂದ ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಹಾಕಿದರು. ಕ್ಯಾಲ್ಗರಿಯ ಸ್ಪರ್ಧೆಯಲ್ಲಿ ಸೇನ್ ಆರಂಭದಿಂದಲೂ ಕಠಿಣ ಸವಾಲುಗಳನ್ನು ಎದುರಿಸುತ್ತಾ ಬಂದರು. ಎಲ್ಲ ಸವಾಲುಗಳನ್ನು ಮೆಟ್ಟಿನಿಂತ ಸೇನ್ ಅಂತಿಮವಾಗಿ ಫೈನಲ್ ತಲುಪಿದರು.
2022ರ ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸೇನ್ ಕೊನೆಯ ಬಾರಿಗೆ ಫೈನಲ್ ಆಡಿದ್ದರು. ಇದಾದ ನಂತರ ಸ್ಪರ್ಧೆಯ ಪ್ರಮುಖ ಘಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ಮುಗ್ಗರಿಸುತ್ತಿದ್ದರು. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ನಿಂದ ಈ ವರ್ಷ ನಡೆಯುವ ಸೂಪರ್ 500ನ ಮೂರನೇ ಪ್ರವಾಸದ ಇದಾಗಿದೆ. ಈ ವರ್ಷದಲ್ಲಿ ವಿಶ್ವ ಪ್ರವಾಸದಲ್ಲಿ ಸೇನ್ ಅವರು ಥಾಯ್ಲೆಂಡ್ ಓಪನ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು. ಆದರೆ ಈಗ ಕೆನಡಾ ಓಪನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.