ವೆಲ್ವಾ(ಸ್ಪೇನ್) :ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಸೆಮಿಫೈನಲ್ನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಆಟಗಾರ ಲಕ್ಷ್ಯಸೇನ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಕಿಡಂಬಿ ಶ್ರೀಕಾಂತ್ ಐತಿಹಾಸಿಕ ದಾಖಲೆ ಜೊತೆಗೆ ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಈ ಮೂಲಕ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಸೆಮೀಸ್ ಪಂದ್ಯದಲ್ಲಿ ಸೋಲು ಕಂಡಿರುವ ಭಾರತದ ಮತ್ತೋರ್ವ ಆಟಗಾರ ಲಕ್ಷ್ಯಸೇನ್ ಕಂಚಿಗೆ ಮುತ್ತಿಕ್ಕಿದ್ದಾರೆ.
ಭಾರತದ ಶ್ರೀಕಾಂತ್ ಹಾಗೂ ಸೇನ್ ಮಧ್ಯೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿ ಶ್ರೀಕಾಂತ್ 17-21, 21-14, 21-17 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮೊದಲ ಸೆಟ್ನಲ್ಲಿ ಗೆಲುವು ಸಾಧಿಸಿದ್ದ ಲಕ್ಷ್ಯಸೇನ್ ನಂತರದ ಎರಡು ಸೆಟ್ಗಳಲ್ಲಿ ನಿರಾಸೆ ಅನುಭಸಿದರು.
ವಿಶ್ವಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿರುವ ಮೊದಲ ಪುರುಷರ ಆಟಗಾರನೆಂಬ ಕೀರ್ತಿಗೆ ಇದೀಗ ಶ್ರೀಕಾಂತ್ ಭಾಜನರಾಗಿದ್ದು, ಫೈನಲ್ನಲ್ಲಿ ಸೋಲು ಕಂಡರೂ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.ಈ ಮೂಲಕ ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ದೇಶಕ್ಕೆ ಸಿಗಲಿದೆ.