ಕೋಪೆನ್ ಹೇಗನ್(ಡೆನ್ಮಾರ್ಕ್):ವಿಶ್ವದ ಅಗ್ರಮಾನ್ಯ ಆಟಗಾರ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಮಣಿಸಿದ ಭಾರತದ ಷಟ್ಲರ್ ಹೆಚ್ ಎಸ್ ಪ್ರಣಯ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿಕೊಂಡರು. ಪ್ರಕಾಶ್ ಪಡುಕೋಣೆ, ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ನಂತರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕವನ್ನು ಖಾತರಿಪಡಿಸಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಣಯ್ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲ ಗೇಮ್ ಸೋತರೂ ಅಮೋಘ ರೀತಿಯಲ್ಲಿ ಪುಟಿದೆದ್ದು ನಿಂತ ಪ್ರಣಯ್ 21-13, 15-21, 16-21 ರಿಂದ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಕೇರಳದ 31 ವರ್ಷದ ಪ್ರಣಯ್ ಬಿರುಸಿನ ಸ್ಮ್ಯಾಷ್, ಆಕರ್ಷಕ ರಿಟರ್ನ್ ಮತ್ತು ಡ್ರಾಪ್‌ಶಾಟ್‌ಗಳ ಮೂಲಕ ಹಾಲಿ ಚಾಂಪಿಯನ್ ಅಕ್ಸೆಲ್ಸೆನ್ ಅವರನ್ನು ನಿಬ್ಬೆರಗಾಗಿಸಿದರು. 68 ನಿಮಿಷಗಳ ಹಣಾಹಣಿಯಲ್ಲಿ ಗೆಲುವು ಒಲಿಸಿಕೊಂಡರು.
ಪ್ರಣಯ್ ಈ ವರ್ಷ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿ ಗೆದ್ದುಕೊಂಡಿದ್ದರು. ಅಲ್ಲದೇ, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. ಇಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿ ಭಾರತಕ್ಕೆ 14ನೇ ಪದಕ ಖಚಿತಪಡಿಸಿಕೊಂಡರು. ಈ ಟೂರ್ನಿಯಲ್ಲಿ ಸೆಮಿ ಫೈನಲ್‌ನಲ್ಲಿ ಸೋತ ಆಟಗಾರರಿಗೆ ಕಂಚಿನ ಪದಕ ಸಿಗಲಿದೆ.
ಪಿ.ವಿ ಸಿಂಧು ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಸೇರಿದಂತೆ ಐದು ಪದಕ ಗೆದಿದ್ದಾರೆ. ಸೈನಾ ನೆಹ್ವಾಲ್ (ಬೆಳ್ಳಿ ಮತ್ತು ಕಂಚು) ಎರಡು ಪದಕ ಗೆದ್ದಿದ್ದರೆ, ಕಿದಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು), ಬಿ.ಸಾಯಿ ಪ್ರಣೀತ್ (ಕಂಚು) ಮತ್ತು ಪ್ರಕಾಶ್ ಪಡುಕೋಣೆ (ಕಂಚು) ಅವರು ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಇತರರು. ಪುರುಷರ ಡಬಲ್ಸ್‌ನಲ್ಲಿ ಕಳೆದ ಬಾರಿಯ ಟೂರ್ನಿಯಲ್ಲಿ ಸಾತ್ವಿಕ್ ಮತ್ತು ಚಿರಾಗ್ ಹಾಗೂ 2011 ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಲಾ ಗುಟ್ಟಾ– ಅಶ್ವಿನಿ ಪೊನ್ನಪ್ಪ ಜೋಡಿ ಕಂಚು ಗೆದ್ದುಕೊಂಡಿದ್ದರು.
ಪರಾಭವಗೊಂಡ ಸಾತ್ವಿಕ್ ಚಿರಾಗ್ ಜೋಡಿ: ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 18–21, 19–21 ರಿಂದ ಡೆನ್ಮಾರ್ಕ್‌ನ ಕಿಮ್ ಆಸ್ಟ್ರಪ್– ಆ್ಯಂಡರ್ಸ್ ಸ್ಕಾರುಪ್ ರಸ್ಮುಸೆನ್ ಎದುರು ಪರಾಭವಗೊಂಡಿತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಸಾತ್ವಿಕ್– ಚಿರಾಗ್ 2021ರ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಸತತ 2ನೇ ಪದಕ ಗೆಲ್ಲಬೇಕೆಂಬ ಅವರ ಆಸೆ ಈಡೇರಲಿಲ್ಲ. ಡೆನ್ಮಾರ್ಕ್ ಜೋಡಿ 48 ನಿಮಿಷಗಳಲ್ಲಿ ಜಯ ಸಾಧಿಸಿ ಸೆಮಿ ಫೈನಲ್‌ಗೆ ಮುನ್ನಡೆಯಿತು.
ಮೊದಲ ಗೇಮ್‌ನ ಆರಂಭದಲ್ಲಿ 5–1 ರಿಂದ ಮುನ್ನಡೆ ಸಾಧಿಸಿದ ಕಿಮ್– ಆ್ಯಂಡರ್ಸ್, ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಬಳಿಕ 11–6, 15–9ರಲ್ಲಿ ಮೇಲುಗೈ ಸಾಧಿಸಿದರು. ಚಿರಾಗ್ ಅವರು ಲಯ ಕಂಡುಕೊಳ್ಳಲು ಪರದಾಡಿದರೂ, ಸಾತ್ವಿಕ್ ಕೆಲವೊಂದು ಬಿರುಸಿನ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್ ಕಲೆ ಹಾಕಿದರು. ಭಾರತದ ಜೋಡಿ ಹಿನ್ನಡೆಯನ್ನು 15–18ಕ್ಕೆ ತಗ್ಗಿಸಿದರೂ, ಡೆನ್ಮಾರ್ಕ್ ಆಟಗಾರರು ಶಿಸ್ತಿನ ಆಟವಾಡಿ ಮೊದಲ ಗೇಮ್ ಗೆದ್ದರು.
ಇದನ್ನೂ ಓದಿ:BWF ranking: ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್