ನವದೆಹಲಿ: ಇಂಡೋನೇಷ್ಯಾ ಓಪನ್‌ನಲ್ಲಿ ತಮ್ಮ ಐತಿಹಾಸಿಕ ಬಿಡಬ್ಲ್ಯೂಎಫ್ ಸೂಪರ್ 1000 ಪ್ರಶಸ್ತಿ ಗೆದ್ದ ನಂತರ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ತಮ್ಮ ವೃತ್ತಿಜೀವನದ ಉನ್ನತ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಈ ಜೋಡಿಯು ಭಾನುವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಸೂಪರ್ 1000 ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಮಣಿಸಿದೆ.
ಇದರಿಂದ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದು, ಮೂರನೇ ಸ್ಥಾನವನ್ನು ಪಡೆದಿಕೊಂಡಿದ್ದಾರೆ. ಸಾತ್ವಿಕ್ ಮತ್ತು ಚಿರಾಗ್ 2023ರಲ್ಲಿ ಉತ್ತಮ ಪ್ರವಾಸಿ ವರ್ಷ ಕಾಣುತ್ತಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಸ್ವಿಸ್ ಓಪನ್ ಮತ್ತು ಇಂಡೋನೇಷ್ಯಾ ಓಪನ್ ಸೇರಿದಂತೆ ಎರಡು ವಿಶ್ವ ಪ್ರವಾಸ ಪಂದ್ಯಾವಳಿಗಳಲ್ಲಿ ವಿಜಯಶಾಲಿಯಾಗಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮೂರು ಸ್ಥಾನಗಳ ಏರಿಕೆಯೊಂದಿಗೆ ಟಾಪ್ 20ಕ್ಕೆ ಪ್ರವೇಶಿಸಿ 19ನೇ ವಿಶ್ವ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಲಕ್ಷ್ಯ ಸೇನ್ ಎರಡು ಸ್ಥಾನಗಳ ಏರಿಕೆ ಕಂಡಿದ್ದು 18ನೇ ಶ್ರೇಯಾಂಕ ಪಡೆದಿದ್ದಾರೆ. ವಿಶ್ವದ ಅತ್ಯುನ್ನತ ಶ್ರೇಯಾಂಕದ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ ಹೆಚ್.ಎಸ್. ಪ್ರಣಯ್, ಇಂಡೋನೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್ ಸೋಲಿನ ನಂತರ ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಉದಯೋನ್ಮುಖ ಪ್ರತಿಭೆ ಪ್ರಿಯಾಂಶು ರಾಜಾವತ್ ಅವರು 30ನೇ ರ‍್ಯಾಂಕ್ ಪಡೆದುಕೊಂಡಿದ್ದು ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ. ಇವರು ಅಗ್ರ 30 ಶ್ರೇಯಾಂಕಗಳನ್ನು ಪ್ರವೇಶಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.