ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ತಂಡ ವಿರುದ್ಧ 38-31 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಡೆಲ್ಲಿ ತಂಡದ ನಾಯಕ ನವೀನ್ 13 ಅಂಕ ಗಳಿಸಿ ಮುನ್ನಡೆ ಸಾಧಿಸಿದರೆ, ಅಶು ಮಲಿಕ್ 9 ಅಂಕ ಗಳಿಸಿದರು. 5ನೇ ನಿಮಿಷದಲ್ಲಿ ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು 3- 3ರ ಸಮಬಲ ಸಾಧಿಸಿದ್ದವು. ಆದರೆ, 8ನೇ ನಿಮಿಷದಲ್ಲಿ ವಿಕಾಸ್ ಖಂಡೋಲಾರನ್ನ ಟ್ಯಾಕಲ್ ಮಾಡಿದ ಡೆಲ್ಲಿ 6-3ರಲ್ಲಿ ಮುನ್ನಡೆ ಸಾಧಿಸಿತು. 12ನೇ ನಿಮಿಷದಲ್ಲಿ ಬುಲ್ಸ್ಗಳನ್ನ ಆಲ್ಔಟ್ ಮಾಡುವ ಮೂಲಕ ಡೆಲ್ಲಿ 14-7ರ ಮುನ್ನಡೆ ಸಾಧಿಸಿತು. 18ನೇ ನಿಮಿಷದಲ್ಲಿ ಅಶು ಮಲಿಕ್ ರನ್ನ ಸೂಪರ್ ಟ್ಯಾಕಲ್ ಮಾಡಿದ ಬುಲ್ಸ್ ತಿರುಗೇಟು ನೀಡಿತಾದರೂ ಡೆಲ್ಲಿ ತಂಡ ಮೊದಲಾರ್ಧದ ಅಂತ್ಯಕ್ಕೆ 17-12ರ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದ ಆರಂಭದಲ್ಲೇ ಸೌರಭ್ ನಂದಾಲ್ ಅವರು ಡೆಲ್ಲಿಯ ನವೀನ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಬುಲ್ಸ್ ತಂಡದ ಅಂತರವನ್ನು 17-20 ಅಂಕಗಳಿಗೆ ಇಳಿಸಿತು. ನಂತರ ಸುಶೀಲ್ ರೈಡ್ ಪಾಯಿಂಟ್ ಗಳಿಸಿದರೆ, ಬುಲ್ಸ್ ಪರ ನಂದಾಲ್ ಡೆಲ್ಲಿಯ ಅಶು ಮಲಿಕ್ ಅವರನ್ನು ನಿಭಾಯಿಸಿದರು. ಆದರೆ ಡೆಲ್ಲಿ ತಂಡವು 26ನೇ ನಿಮಿಷದಲ್ಲಿ 23-20ರಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. 31ನೇ ನಿಮಿಷದಲ್ಲಿ ಡೆಲ್ಲಿ 29-23 ಅಂಕಗಳ ಮುನ್ನಡೆ ಸಾಧಿಸಿತು.
‘33ನೇ ನಿಮಿಷದಲ್ಲಿ ಹಿಮ್ಮತ್ ಅಂತಿಲ್, ಯೋಗೇಶ್ ಮತ್ತು ಮೋಹಿತ್ಗಳಿಸಿದ ಅಂಕದಿಂದ ಡೆಲ್ಲಿ 32-29 ಅಂಕಗಳ ಮುನ್ನಡೆ ಸಾಧಿಸಿತು. 38ನೇ ನಿಮಿಷದಲ್ಲಿ ನವೀನ್ ಗಳಿಸಿದ ಅಂಕದಿಂದ ದಬಾಂಗ್ ಡೆಲ್ಲಿ 36-30 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಅಶು ಮಲಿಕ್ ಮತ್ತೊಂದು ರೈಡ್ನೊಂದಿಗೆ ದಬಾಂಗ್ ಡೆಲ್ಲಿಯ ಗೆಲುವಿನ ಅಂತರವನ್ನ ಹೆಚ್ಚಿಸಿದರು.
ಬೆಸ್ಟ್ ರೈಡರ್ ಮತ್ತು ಡಿಫೆಂಡರ್
ದಬಾಂಗ್ ದೆಹಲಿ
ಅತ್ಯುತ್ತಮ ರೈಡರ್ - ನವೀನ್ ಕುಮಾರ್ (12 ರೇಡ್ ಪಾಯಿಂಟ್)
ಅತ್ಯುತ್ತಮ ಡಿಫೆಂಡರ್ - ವಿಶಾಲ್ ಭಾರದ್ವಾಜ್ (3 ಟ್ಯಾಕಲ್ ಪಾಯಿಂಟ್ಸ್)