ನವದೆಹಲಿ: ಒಲಿಂಪಿಯನ್ ಸಿ.ಎ. ಭವಾನಿ ದೇವಿ ಸೋಮವಾರ ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್ ಮಹಿಳೆಯರ ಸೇಬರ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು. ಆದರೆ, ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪದಕ ಒಲಿದುಬಂದಿದೆ.
ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಝೆನಾಬ್ ದೇಬೆಕೋವಾ ವಿರುದ್ಧದ ಕಠಿಣ ಹೋರಾಟದಲ್ಲಿ ಭವಾನಿ 14-15 ರಿಂದ ಸೋತರು. ಇದಕ್ಕೂ ಮೊದಲು ಭವಾನಿ, ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಜಪಾನ್‌ನ ಮಿಸಾಕಿ ಎಮುರಾ ಅವರನ್ನು 15-10 ರಿಂದ ಸೋಲಿಸಿದ್ದರು. ಇದು ಮಿಸಾಕಿ ವಿರುದ್ಧ ಭವಾನಿ ಅವರ ಮೊದಲ ಗೆಲುವಾಗಿತ್ತು.
ಭವಾನಿ 64ರ ಸುತ್ತಿನಲ್ಲಿ ಬೈ ಪಡೆದಿದ್ದರು. ನಂತರ ಮುಂದಿನ ಸುತ್ತಿನಲ್ಲಿ ಕಜಕಿಸ್ತಾನ್‌ನ ದೋಸ್ಪೆ ಕರೀನಾ ಅವರನ್ನು ಮಣಿಸಿದ್ದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಓಜಾಕಿ ಸೆರಿ ಅವರನ್ನು 15-11 ರಿಂದ ಪರಾಭವಗೊಳಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅನ್ನು ಮಣಿಸಿದ ನಂತರ ಮಾತನಾಡಿದ್ದ ಭವಾನಿ,"ವಿಶ್ವದ ಕೆಲವು ಅಗ್ರ ಶ್ರೇಯಾಂಕಿತ ಆಟಗಾರ್ತಿಯನ್ನು ಸೋಲಿಸುವುದು ನನ್ನ ಕನಸಾಗಿತ್ತು. ಮಿಸಾಕಿ ವಿರುದ್ಧ ಜಯ ಸಾಧಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದರು.
“ಏಷ್ಯನ್‌ನಲ್ಲಿ ದೇಶಕ್ಕಾಗಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇದು ಉತ್ತಮ ಕ್ಷಣವಾಗಿದೆ. ಮಿಸಾಕಿಯನ್ನು ಸೋಲಿಸುವುದು ತುಂಬಾ ದೊಡ್ಡದಾಗಿದೆ ಏಕೆಂದರೆ ಅವಳು ತುಂಬಾ ಒಳ್ಳೆಯ ಮತ್ತು ಸ್ಥಿರವಾದ ಫೆನ್ಸರ್ ಆಗಿದ್ದಾಳೆ. ನಾನು ಹಿಂದಿನ ಏಷ್ಯನ್‌ನಲ್ಲಿ ಮಿಸಾಕ್‌ಗೆ 16 ರ ಸುತ್ತಿನಲ್ಲಿ ಸೋತಿದ್ದೆ. ಆಕೆ ವಿರುದ್ಧ ಒಂದು ಯೋಜನೆಯೊಂದಿಗೆ ಹೋಗಿದ್ದೆ ಮತ್ತು ಯಶಸ್ಸು ಕಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದ್ದರು.